ಕನ್ನಡಪ್ರಭ ವಾರ್ತೆ ಕಲಬುರಗಿ
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಿರುವ ರಾಜಕೀಯ ಷಡ್ಯಂತ್ರ ಖಂಡಿಸಿ ಕಲಬುರಗಿ ನಗರದಲ್ಲಿ ಸೋಮವಾರ ಅಖಿಲ ಕರ್ನಾಟಕ ಕುರುಬರ ಸಂಘ ಹಾಗೂ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಪ್ರತಿಭಟನೆ ನಡೆಸಿ ಬೆಳವಣಿಗೆಯನ್ನು ಉಗ್ರವಾಗಿ ಖಂಡಿಸಿತು.ಇಲ್ಲಿನ ಸರ್ದಾರ್ ಪಟೇಲ್ ವೃತ್ತದಿಂದ ಶುರುವಾದ ಪ್ರತಿಭಟನೆಯಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಇರುವ ವಿಕಾಸ ಭವನಕ್ಕೆ ಆಗಮಿಸಿ ರಾಜ್ಯಪಾಲರು, ಬಿಜೆಪಿ, ಜೆಡಿಎಸ್ ವಿರುದ್ಧ ಹಾಗೂ ಆರ್ಟಿಐ ಕಾರ್ಯಕರ್ತನ ವಿರುದ್ಧ ಘೋಷಣೆ ಕೂಗಿ ರಾಜ್ಯಪಾಲರ ನಡೆ ಖಂಡಿಸಿದರು.
ರಾಜ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಎಂ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿಆರ್ ಪಾಟೀಲ್, ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ್, ಲಚ್ಚಪ್ಪ ಜಮಾದಾರ, ಲಿಂಗರಾಜ ತಾರಫೈಲ್, ಮಹಾಂತೇಶ ಕೌಲಗಿ ಸೇರಿದಂತೆ ಕುರುಬ ಸಮಾಜದ ಮುಖಂಡರು, ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಪಾಲರ ನಡೆಯನ್ನು ಕುಟುವಾಗಿ ಖಂಡಿಸಿದರಲ್ಲದೆ ತಕ್ಷಣ ರಾಜ್ಯಪಾಲರು ನೊಟೀಸ್ ವಾಪಸ್ ಪಡೆಯಲಿ, ಬಿಜೆಪಿ ಕೈಗೊಂಬೆ ರೀತಿ ವರ್ತಿಸೋದನ್ನ ಬಿಡಲಿ ಎಂದು ಆಗ್ರಹಿಸಿದರು.ರಾಜ್ಯಪಾಲರ ಹುದ್ದೆ ಸಾಂವಿಧಾನಿಕವಾಗಿದೆ. ಸಿದ್ದರಾಮಯ್ಯನವರು ಪಾರದರ್ಶಕತೆಗೆ ಹೆಸರಾದವರು. ಯಾರೋ ಒಬ್ಬ ಆರ್‌ಟಿಐ ಕಾರ್ಯಕರ್ತ ದೂರು ನೀಡಿದ ಅಂದಾಕ್ಷಣ ಹಿಂದೆ ಮುಂದೆ ನೋಡದೆ ನೊಟೀಸ್ ಕೊಡುವುದೆ? ಎಂದೂ ಹೋರಾಟಗಾರರು ಪ್ರಶ್ನಿಸಿದರು.
ಸರ್ದಾರ್ ಪಟೇಲ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕುರುಬರು, ಸಿದ್ದರಾಮಯ್ಯ ಅಭಿಮಾನಿಗಳು, ಪಂಚ ಗ್ಯಾರಂಟಿ ಯೋಜನೆಯ ಫಲಾನುಭವಿಗಳೆಲ್ಲರೂ ಸೇರಿದ್ದರು. ಮಾನವ ಸರಪಳಿ ರಚಿಸಿ ಜಿಲ್ಲಾಡಳಿತದ ಕಚೇರಿಗೆ ಮುತ್ತಿಗೆ ಹಾಕಿದರು. ಈ ಹಂತದಲ್ಲಿ ಮುಖ್ಯ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸಾರ್ವಜನಿಕರು ವಾಹನ ಸವಾರರು ಪರದಾಡಿದರು.ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪರವಾಗಿಯೂ ಪಾಲ್ಗೊಂಡಿದ್ದ ಮಹಾಂತೇಶ ಕೌಲಗಿ, ಬಸಯ್ಯ ಗುತ್ತೇದಾರ್, ಸೈಬಣ್ಣ ಹೆಳವರ, ಮೈಬೂಬ್ ದರ್ವೇಶಿ, ರಮೇಶ ನಾಟೀಕಾರ್, ಸುಭಾಸ ಪಾಂಚಾಳ, ವಿಠ್ಠಲ ಮಡಿವಾಳ್, ಶರಣು ಸೂರ್ಯವಂಶಿ, ಅರುಣಕುಮಾರ್ ಕಟಿಬು, ರೇವಣಸಿದ್ದಪ್ಪ ಸಾತನೂರ್, ಪಿಡ್ಡಪ್ಪ ಜಾಲಗಾರ್, ಕುರುಬರ ಸಂಘದ ಪರವಾಗಿ ಸೈಬಣ್ಣ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ರವಿಗೌಂಡ ಕಟ್ಟೀಮನಿ, ತಿಪ್ಪಣ್ಣ, ಹೂವಣ್ಣ, ಬೆಂಡೆಪ್ಪ ಅಂಬಾರ, ವಿಟ್ಠಲ ಬರಗಾಲಿ, ಚಂದ್ರಶೇಖರ ಗೋಧಳಿ, ವೀರಪ್ಪ ಸೇರಿದಂತೆ ಅನೇಕ ಮುಖಂಡರು ರಾಜ್ಯಪಾಲರ ನಡೆ ವಿರೋಧಿಸಿ ಘೋಷಣೆ ಹಾಕಿದರಲ್ಲದೆ ರಾಜ್ಯಪಾಲರಿಂದ ಅಧಿಕಾರ ದುರುಪಯೋಗವಾಗಿದೆ ಎಂದು ಆಕ್ರೋಶ ಹೊರಹಾಕಿದರು.
---ಆತ್ಮಹತ್ಯೆಗೆ ಯತ್ನಿಸಿದ ಸಿದ್ದು ಅಭಿಮಾನಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರು ಆತನ ಕೈಯಲ್ಲಿದ್ದ ಸೀಮೆಎಣ್ಣೆ ತುಂಬಿದ ಡಬ್ಬಿಯನ್ನು ಕಸಿದುಕೊಂಡು ಮುಂದಾಗಬಹುದಾದ ಅನಾಹುತ ತಪ್ಪಿಸಿದರು.