ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಎದರುಗಡೆ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಕೈಗೆ ಕಪುಬಟ್ಟೆ ಧರಿಸುವ ಮೂಲಕ ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ವೆಂಕಟೇಶ ಕರ್ಮಾಚಾರಿ ಮಾತನಾಡಿ, ನಮ್ಮ ಬೇಡಿಕೆಗಳ ಕುರಿತು ಸರ್ಕಾರ ಸೂಕ್ತ ತಿರ್ಮಾನ ಕೈಗೊಳ್ಳಬೇಕು. ಅಂದಾಗ ಮಾತ್ರ ನಾವು ಪ್ರತಿಭಟನೆ ಹಿಂಪಡೆದುಕೊಳ್ಳುತ್ತೇವೆ. ಇಲ್ಲವಾದಲ್ಲಿ ಸೆ. 27ರಂದು ಜಿಲ್ಲಾಮಟ್ಟದಲ್ಲಿ ಹೀಗೆ ಅನಿರ್ದಿಷಾವಧಿಯ ಹೋರಾಟ ನಡೆಸಲಾಗುತ್ತದೆ ಎಂದರು.
ಸಂಘದ ಖಜಾಂಚಿ ಶರಣಪ್ಪ ಮಾತನಾಡಿ, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್ ಹಾಗೂ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕತೆ ಇರುವ ಮೊಬೈಲ್ ಸಾಧನ ಹಾಗೂ ಲ್ಯಾಪ್ ಟಾಪ್ ಹಾಗೂ ಬೇಕಾಗುವ ಸಾಧನ ನೀಡಬೇಕು. ಏಕಕಾಲದಲ್ಲಿ ಪ್ರಗತಿ ಸಾಧಿಸಲು ಕೆಲಸದ ಒತ್ತಡಗಳು ಹೆಚ್ಚಾದ ಪರಿಣಾಮವಾಗಿ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತಿವೆ. ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಳಿತು ಕೆಲಸ ಮಾಡಲು ಟೇಬಲ್, ಕುರ್ಚಿ, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡಾಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್ ಪ್ರಿಂಟರ್ ಮತ್ತು ಸ್ಕ್ಯಾನರ್ ಅವಶ್ಯಕತೆ ಇದೆ ಹಾಗೂ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳಿದ್ದು, ಕೂಡಲೇ ಸ್ಪಂದಿಸಬೇಕು ಎಂದರು.ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ ಅಶೋಕ ಶಿಗ್ಗಾಂವಿ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಈ ಸಂದರ್ಭ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ ಹಾಗೂ ಗೌರವಾಧ್ಯಕ್ಷ ಶ್ರೀನಿವಾಸ್ ನಾಯಕ, ಪ್ರಧಾನ ಕಾರ್ಯದರ್ಶಿ ಶಿವಪ್ಪ ವಾಗ್ಮೊರೆ, ಶರಣಯ್ಯ ನಿಡಗುಂದಿ ಮಠ, ಕಂದಾಯ ನಿರೀಕ್ಷಕ ಉಮೇಶ್ ಗೌಡ ಪಾಟೀಲ, ಶರಣಪ್ಪ ದಾಸರ, ಗ್ರಾಮ ಆಡಳಿತ ಅಧಿಕಾರಿಗಳ ಸಂಘಟನಾ ಕಾರ್ಯದರ್ಶಿ ಮೌನೇಶ ಮಡಿವಾಳರ, ಸಂಘದ ಉಪಾಧ್ಯಕ್ಷ ಸಂಗಮೇಶ, ಹನುಮಂತ ಸಂಶಿ, ವೀರೇಶ ಎತ್ತಿನಮನಿ. ಮಂಜುನಾಥ್ ಗುಡ್ಡದ, ಸೂರ್ಯಕಾಂತ, ಅನಿತಾ ಬಾಯಿ, ಪ್ರತಿಭಾ, ವಿದ್ಯಾಶ್ರೀ, ಹಜರತ್ ಬಿ, ರಜಿಯಾಬೇಗಂ, ರಫಿಕಾ ಬಾನು, ಹಾಗೂ ಗ್ರಾಮ ಸಹಾಯಕರ ಸಂಘದ ತಾಲೂಕಾಧ್ಯಕ್ಷ ಬಸಪ್ಪ ವಾಲಿಕಾರ್ ಹಾಗೂ ಸದಸ್ಯರಿದ್ದರು.