ರಟ್ಟೀಹಳ್ಳಿ: ತಾಲೂಕಿನ ಪುರದಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳು ಸೋರುತ್ತಿದ್ದರೂ ಸಂಬಂಧ ಪಟ್ಟ ಶಿಕ್ಷಣ ಇಲಾಖೆ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡು ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಶಾಲಾ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.
ಗ್ರಾಮಸ್ಥ ಶಿವಾನಂದಪ್ಪ ಕಲವೀರಪ್ಪನವರ ಮಾತನಾಡಿ, ಕಳೆದ ಹಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಶಾಲಾ ಕೊಠಡಿಗಳು ಸಂಪೂರ್ಣ ಸೋರುತ್ತಿರುವುದರಿಂದ ಮಕ್ಕಳು ಭಯದಲ್ಲೇ ಶಾಲೆಗೆ ತೆರಳುವಂತಾಗಿದೆ. ಶಿಕ್ಷಣ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಅನಿವಾರ್ಯವಾಗಿ ಬೇರೆ ಶಾಲೆಗಳಿಗೆ ಕಳಿಸುವಂತಾಗಿದೆ. ಕಾರಣ ತಾತ್ಕಾಲಿಕ ದುರಸ್ತಿಗೆ ಮುಂದಾಗದೆ ಶಾಶ್ವತ ಹೊಸ ಕಟ್ಟಡಗಳಿಗೆ ಅನುದಾನ ಘೋಷಿಸಬೇಕು ಎಂದು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿ.ಇ. ಎನ್. ಶ್ರೀಧರ ಪ್ರತಿಭಟನಾಕಾರರನ್ನು ಮನವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಇದಕೊಪ್ಪದ ಪ್ರತಿಭಟನಾಕಾರರು ಕೆಲ ಕಾಲ ಮಾತಿನ ಚಕಮಕಿ ನಡೆಸಿದರು, ನಂತರ ಪ್ರತಿಭಟನಾಕಾರರ ಬೇಡಿಕೆಗಳಿಗೆ ಒಪ್ಪಿದ ನಂತರ ಪ್ರತಿಭಟನೆ ಕೈಬಿಡಲಾಯಿತು.ಇದೇ ಸಂದರ್ಭದಲ್ಲಿ ಕೆ.ವಿ. ಪಾಟೀಲ್, ರುದ್ರಗೌಡ ಹಿತ್ತಲಮನಿ, ಗದಿಗೆಪ್ಪ ಮೂಲೇರ, ಚಂದ್ರಪ್ಪ ಬಾಸೂರ, ಸತೀಶ ಪಾಳೇದ, ಶೇಖರಗೌಡ ಹಿತ್ತಲಮನಿ, ಶಿವಾನಂದಪ್ಪ ತಡಕನಹಳ್ಳಿ, ಮಂಜಪ್ಪ ಮೂಲೇರ, ಸಂದೀಪ ಹಿತ್ತಲಮನಿ ಮುಂತಾದವರು ಇದ್ದರು.
ತಾಪಂ ಅನಿರ್ಭೀತ ಅನುದಾನ ಹಾಗೂ ಜಿಲ್ಲಾ ಪಂಚಾಯತ್ ಅನುದಾನದಿಂದ 4 ಲಕ್ಷದಲ್ಲಿ ಕ್ರಿಯಾಯೋಜನೆ ರೂಪಿಸಿ ದುರಸ್ತಿ ಮಾಡಲಾಗುವುದು ನಂತರ ನೂತನ ಕೊಠಡಿಗಳಿಗೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದು, ಸರಕಾರದಿಂದ ಮಂಜೂರಾದ ನಂತರ ನೂತನ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದು ಬಿಇಒ ಎನ್. ಶ್ರೀಧರ ಹೇಳಿದರು.