ಗ್ರಾಪಂ ನೌಕರನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Feb 26, 2026, 02:15 AM IST
ಫೋಟೋ : 25ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಕರಗುದರಿ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಹಾನಗಲ್ಲ: ಕರಗುದರಿ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಕರಗುದರಿ ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನಾಗರಾಜ ಕರಿಕ್ಯಾತನಹಳ್ಳಿ ಎಂಬುವವರ ಮೇಲೆ ಖ್ವಾಜಾಗೌಸ್ ಬುಡನವರ ಎಂಬುವವರು ಮಂಗಳವಾರ ಮಧ್ಯಾಹ್ನ 4ರ ಹೊತ್ತಿಗೆ ಗ್ರಾಪಂ ಕಚೇರಿಯಲ್ಲಿಯೇ ಹಲ್ಲೆ ನಡೆಸಿ, ಕಚೇರಿ ಪೀಠೋಪಕರಣಗಳನ್ನು ಜಖಂ ಮಾಡಿ, ಕಂಪ್ಯೂಟರ್‌ಗಳನ್ನು ಹಾಳು ಮಾಡಿದ್ದ ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯ ನಂತರ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ. ಸರ್ಕಾರಿ ನೌಕರರ ಮೇಲಿನ ಹಲ್ಲೆ ಅದು ಅಮಾನವೀಯ. ಶೇ. 50ರಷ್ಟು ಕಡಿಮೆ ಸಿಬ್ಬಂದಿಯನ್ನಿಟ್ಟುಕೊಂಡು ಪೂರ್ಣ ಪ್ರಮಾಣದ ಸೇವೆ ಸಲ್ಲಿಸುತ್ತಿರುವ ನೌಕರರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಿರುವುದು ಇಡೀ ನೌಕರ ವರ್ಗವನ್ನು ಕೆರಳಿಸಿದೆ. ಇಂಥ ಹಲ್ಲೆಗಳು ನೌಕರರ ಕೆಲಸದ ಇಚ್ಛಾಶಕ್ತಿಯನ್ನೇ ಕುಂದಿಸುತ್ತಿವೆ. ಸರ್ಕಾರ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸದಿದ್ದರೆ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕವಾಗಿ ಸೇವೆ ಸಲ್ಲಿಸುವುದು ಸಾಧ್ಯವಿಲ್ಲ. ಒತ್ತಡದಲ್ಲಿ ಕೆಲಸ ಮಾಡುತ್ತಿರುವ ನೌಕರರು ಕೆಲಸವನ್ನೇ ಬಿಟ್ಟು ಓಡುವಷ್ಟು ಒತ್ತಡ ಆರಂಭವಾಗಿದೆ. ನಮ್ಮ ನೌಕರರ ಮೇಲೆ ಆದ ಹಲ್ಲೆ ಇಡೀ ಸರ್ಕಾರಿ ನೌಕರರಿಗೆ ಮಾಡಿದ ಅವಮಾನ ಇದನ್ನು ಖಂಡಿಸುತ್ತೇವೆ. ಅಲ್ಲದೆ ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ಕಠಿಣ ಕ್ರಮ ಜರುಗಿಸದಿದ್ದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ಈ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸದಿದ್ದರೆ ಜಿಲ್ಲಾದ್ಯಂತ ಪೆನ್ ಡೌನ್ ಕರೆ ಮೂಲಕ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ಒಂದೇ ವರ್ಷದಲ್ಲಿ ಹಾವೇರಿ ಜಿಲ್ಲೆಯಲ್ಲಿ ಇಂತಹ ಮೂರು ಪ್ರಕರಣಗಳು ನಡೆದಿವೆ. ಇದರಿಂದ ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ರಟ್ಟಿಹಳ್ಳಿ, ಸವಣೂರುಗಳಲ್ಲಿ ಆದ ಪ್ರಕರಣಗಳಿಗೆ ಸರ್ಕಾರ ಹಾಗೂ ಆಡಳಿತವನ್ನು ಒತ್ತಾಯಿಸಿ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸಲು ಮನವಿ ಮಾಡಿದ್ದೆವು. ಜನಪ್ರತಿನಿಧಿಗಳು ಅತಿ ಹೆಚ್ಚು ಒತ್ತಡ ಹೇರಿ ನಮ್ಮಿಂದ ಕೆಲಸ ತೆಗೆದುಕೊಳ್ಳುತ್ತಾರೆ. ಆದರೆ, ಈ ರೀತಿಯ ಹಲ್ಲೆ ನಡೆದಾಗ ನಮ್ಮ ಪರವಾಗಿ ನಿಲ್ಲದೇ ಇರುವುದ ಖೇದದ ಸಂಗತಿ. ಅನಿವಾರ್ಯವಾಗಿ ನಾವು ಬೀದಿಗಿಳಿಯಬೇಕಾಗಿದೆ. ಕರಗುದರಿಯಲ್ಲಿ ನಮ್ಮ ನೌಕರರ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ತಪ್ಪಿದಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೇ ರಾಜ್ಯಾದ್ಯಂತ ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸಿ ರಕ್ಷಣೆ ನೀಡಲು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ಎಸ್. ರೇಣುಕಾ, ಸರ್ಕಾರಿ ನೌಕರರ ಮೇಲಿನ ಹಲ್ಲೆ ಪ್ರಕರಣವನ್ನು ನಿರ್ಲಕ್ಷಿಸುವುದಿಲ್ಲ. ಹೀಗಾದರೆ, ಸರ್ಕಾರಿ ನೌಕರರು ಸೇವೆ ಸಲ್ಲಿಸುವುದೇ ಕಷ್ಟವಾದೀತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಕಳಿಸಲಾಗುವುದು. ಸರ್ಕಾರಿ ನೌಕರರು ಎದೆಗುಂದದೇ ಇಂತಹ ಸಂದರ್ಭದಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಹಾಯ ಪಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಒಟ್ಟಾಗಿ ನಿಲ್ಲೋಣ ಎಂದರು.

ತಾಲೂಕು ಪಂಚಾಯಿತಿಯಿಂದ ತಾಲೂಕು ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸರ್ಕಾರಿ ನೌಕರರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಕುಂಚೂರ, ಪರಮೇಶ್ವರ ಗಾಡಿಹುಚ್ಚಣ್ಣನವರ, ಬಸವರಾಜ ದಿಡಗೂರ, ಚಂದ್ರಕಾಂತ ಮಣ್ಣವಡ್ಡರ, ಜಿ.ಎನ್. ಪಾಟೀಲ, ಎಂ.ಎಸ್. ಜಮಾದಾರ, ಪರಶುರಾಮ ಪೂಜಾರ, ಗಿರೀಶ ರಡ್ಡೇರ, ಗಂಗಮ್ಮ ಹಿರೇಮಠ, ಮೌಲಾಸಾಬ ಯಲವಿಗಿ ಸೇರಿದಂತೆ ನೂರಾರು ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂಪ್ಲಿ ಸಮಗ್ರ ಅಭಿವೃದ್ಧಿಗೆ ಸಿದ್ದು ಬಜೆಟ್‌ನಲ್ಲಿ ಹಣ ಕೊಡೋದು ಎಷ್ಟು?
ನುಗ್ಗೆ ಕೃಷಿಗೆ ಪ್ರತಿ ಹಂತದಲ್ಲೂ ಶುದ್ಧತೆ, ಗುಣಮಟ್ಟಕ್ಕೆ ಆದ್ಯತೆ ನೀಡಿ: ನುಗ್ಗೆ ಕೃಷಿಕ ಬ್ಯಾಲಿಹಾಳ ಬಸಯ್ಯ ಹಿರೇಮಠ