ರಾಣಿಬೆನ್ನೂರು: ಮುಸ್ಲಿಮರಿಗೆ ಭೂಮಿ ಹಕ್ಕು ನೀಡಿದರೆ ಅಂತಹ ಅಧಿಕಾರಿಯನ್ನು ನೇಣಿಗೇರಿಸುತ್ತೇನೆ ಎಂದಿರುವ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಗಳವಾರ ಸಂಜೆ ನಗರದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಖಾಸಿಂ ರಬ್ಬಾನಿ ಮಾತನಾಡಿ, ಮುಸಲ್ಮಾನ ಸಮುದಾಯದ ಶೇ. 92 ಮತಗಳನ್ನು ಪಡೆದು ಶಾಸಕ ಸ್ಥಾನವನ್ನು ಗಿಟ್ಟಿಸಿ ಕೊಂಡಿರುವ ಕಾಂಗ್ರೆಸ್ ಶಾಸಕರು ಅದೇ ಸಮುದಾಯದ ವಿರುದ್ಧ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ. ಇದು ಮುಸ್ಲಿಮರ ಮತ ಪಡೆದು ಆಯ್ಕೆಯಾದ ರಾಜ್ಯದ ಕಾಂಗ್ರೆಸ್ ನಾಯಕರ ಮನಸ್ಥಿತಿ ತೋರಿಸುತ್ತದೆ ಎಂದರು.
ಹಾವೇರಿ: ನಾಟಕಕಾರ, ನಿರ್ದೇಶಕ ಸಿಜಿಕೆ ಅವರ ಹೆಸರಿನಲ್ಲಿ ಕಳೆದ 15 ವರ್ಷಗಳಿಂದ ಅವರ ಜನ್ಮದಿನವಾದ ಜೂ. 27ರಂದು ಬೆಂಗಳೂರಿನ ಬೀದಿನಾಟಕ ಅಕಾಡೆಮಿ ನೀಡುವ ಸಿಜಿಕೆ ರಂಗ ಪುರಸ್ಕಾರಕ್ಕೆ ಜಿಲ್ಲೆಯ ಐವರು ರಂಗಭೂಮಿ ಕಲಾವಿದರು ಆಯ್ಕೆಯಾಗಿದ್ದಾರೆ.ಜೂ. 27ರಂದು ಸಂಜೆ 6 ಗಂಟೆಗೆ ಇಲ್ಲಿಯ ಹೊಸಮಠದ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು. ಸಾನ್ನಿಧ್ಯವನ್ನು ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ವಹಿಸುವರು.
ಜಿಲ್ಲಾ ಕಲಾ ಬಳಗ, ಹೊಸಮಠ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಮಕೃಷ್ಣ ಸುಗಂಧಿ(ಪ್ರಸಾದನ ಮತ್ತು ರಂಗ ಸಜ್ಜಿಕೆ), ಶಶಿಕಲಾ ಅಕ್ಕಿ(ರಂಗಭೂಮಿ ಮತ್ತು ಕಿರುತೆರೆ), ಶಂಕರ ತುಮ್ಮಣ್ಣವರ(ನಟ, ನಾಟಕಕಾರ) ಶೇಷಗಿರಿ ಕಲಾ ತಂಡದ ಹರೀಶ ಗುರಪ್ಪನವರ (ನಟ ರಂಗತಂತ್ರಜ್ಞ) ಹಾಗೂ ವಿನಾಯಕ ಗಂಗಾಧರ ಚಕ್ರಸಾಲಿ(ಬಾಲನಟ) ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್.ವಿ. ಚಿನ್ನಿಕಟ್ಟಿ, ಇಂಗಳಗಿಯ ರಂಗಕರ್ಮಿ ಎಂ.ಎಸ್. ಮಾಳವಾಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವೈ.ಬಿ. ಆಲದಕಟ್ಟಿ, ಜಿಲ್ಲಾ ಕಲಾ ಬಳಗದ ಮುಖ್ಯಸ್ಥ ಕೆ.ಆರ್. ಹಿರೇಮಠ, ಕಲಾವಿದ ಎ.ಬಿ. ಗುಡ್ಡಳ್ಳಿ ಹಾಗೂ ಪ್ರಭು ಗುರಪ್ಪನವರ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಪರಿಮಳಾ ಜೈನ್ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.