ಹೈ ಟೆನ್ಶನ್‌ ವೈರ್‌ ಅಳವಡಿಕೆಯಲ್ಲಿ ವಂಚನೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Oct 24, 2026, 02:30 AM IST
ಕುಕನೂರು ತಾಲೂಕಿನ ರಾವಣಕಿ ಗ್ರಾಮದ ಹೈ ಟೆನ್ಶನ್ ಟವರ್ ವಿದ್ಯುತ್ ಸ್ಥಾವರ ಹಾಗೂ ಲೈನ್ ಎಳೆಯುವಲ್ಲಿ ರೈತರನ್ನು ವಂಚಿಸುತ್ತಿರುವ ಕಂಪನಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕುಕನೂರು ತಾಲೂಕಿನ ರಾವಣಕಿ ಗ್ರಾಮದ ಹೈ ಟೆನ್ಶನ್ ಟವರ್ ವಿದ್ಯುತ್ ಸ್ಥಾವರ ಹಾಗೂ ಲೈನ್ ಎಳೆಯುವಲ್ಲಿ ರೈತರನ್ನು ವಂಚಿಸುತ್ತಿರುವ ಕಂಪನಿಗಳ ವಿರುದ್ಧ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಗುರುವಾರ ಅಹೋರಾತ್ರಿ ಧರಣಿ ಸಹ ಜರುಗಿತು.

ಕುಕನೂರು: ತಾಲೂಕಿನ ರಾವಣಕಿ ಗ್ರಾಮದ ಹೈ ಟೆನ್ಶನ್ ಟವರ್ ವಿದ್ಯುತ್ ಸ್ಥಾವರ ಹಾಗೂ ಲೈನ್ ಎಳೆಯುವಲ್ಲಿ ರೈತರನ್ನು ವಂಚಿಸುತ್ತಿರುವ ಕಂಪನಿಗಳ ವಿರುದ್ಧ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಗುರುವಾರ ಅಹೋರಾತ್ರಿ ಧರಣಿ ಸಹ ಜರುಗಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ, ಸ್ಥಳೀಯ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ರೈತರಿಗೆ ಸೂಕ್ತ ಪರಿಹಾರ ವಿತರಿಸುವಲ್ಲಿ ವಿಫಲರಾಗಿದ್ದು, ರೈತರಿಗೆ ವಿಷ ಕೊಡಿ, ಇಲ್ಲವೇ ಪೊಲೀಸರಿಂದ ರೈತರನ್ನು ಗುಂಡಿಟ್ಟು ಕೊಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ಸ್ಥಾವರ ನಿರ್ಮಾಣ ಕಂಪನಿಗಳು ಮುಗ್ಧ ರೈತರನ್ನು ವಂಚಿಸಿ ಖಾಲಿ ಬಾಂಡ್ ಮೇಲೆ ರೈತರನ್ನು ಬೆದರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ನಮ್ಮ ಕೆಲಸಕ್ಕೆ ಅಡಚಣೆ ಉಂಟು ಮಾಡಿದರೆ ನಿಮ್ಮನ್ನು ಒದ್ದು ಒಳಗೆ ಹಾಕಿಸುತ್ತೇನೆ ಎನ್ನುವ ದರ್ಪದ ಮಾತುಗಳು ರೈತರನ್ನು ಕೆರಳಿಸಿದೆ. ರೈತರ ಬಗ್ಗೆ ಕಂಪನಿಗಳ ಗೂಂಡಾವರ್ತನೆ, ಅದಕ್ಕೆ ಅಧಿಕಾರಿಗಳ ಬೆಂಬಲ ರೈತರನ್ನು ಆತಂಕಕ್ಕೀಡು ಮಾಡಿದೆ. ಈ ವಿಷಯವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರೈತರೊಂದಿಗೆ ಮಾತನಾಡಿದ್ದು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ರಾಜೂರು ಮಾತನಾಡಿ, ರೈತ ವರ್ಗ ಜಾಗ್ರತರಾಗದಿದ್ದರೆ ಇಂತಹ ಕಂಪನಿಗಳ ಅಟ್ಟಹಾಸ ಹೆಚ್ಚಾಗುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಅಶೋಕ್ ತೋಟದ ಮಾತನಾಡಿ, ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಚಿವ ಬಸವರಾಜ ರಾಯರಡ್ಡಿ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡಲು ವಿನಂತಿಸುತ್ತೇನೆ ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ್ ನಾಗಲಪುರಮಠ ಮಾತನಾಡಿದರು. ರೈತರಾದ ಕರಿಯಪ್ಪ ಚೆನ್ನದಾಸರ್, ಮಂಜುನಾಥ ತಮ್ಮಣ್ಣವರ್, ನಾಗರಾಜ ಬಿರುಗಣ್ಣನವರ್, ಈರಣ್ಣ ಮಂಗಳಾಪುರ, ಶರಣಪ್ಪ ತಮ್ಮಣ್ಣವರ್, ಹನುಮಪ್ಪ ತಳವಾರ್, ವೀರೇಶ್ ದೊಡ್ಮನಿ, ಯಮನಪ್ಪ ವಾಲ್ಮೀಕಿ, ಮಾರುತಿ ಚನ್ನದಾಸರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಕೊರತೆ, ತೊಗರಿ ಬೆಳೆಗಾರ ಕಂಗಾಲು
ಚಿರತೆ ಉಗುರು ಸಂಗ್ರಹಿಸಿಟ್ಟ ಆರೋಪಿ ಬಂಧನ