ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Dec 15, 2024 2:02 AM

ಸಾರಾಂಶ

ಪಂಚಮಸಾಲಿ ಹೋರಾಟಗಾರರ ಮೇಲೆ ಬೆಳಗಾವಿಯಲ್ಲಿ ಲಾಠಿ ಚಾರ್ಜ್‌ ಮಾಡಿರುವುದು ಸಲ್ಲದು

ಹೂವಿನಹಡಗಲಿ: 2ಎ ಮೀಸಲಾತಿಗಾಗಿ ಪ್ರತಿಭಟಿಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಬೆಳಗಾವಿಯಲ್ಲಿ ಲಾಠಿ ಚಾರ್ಜ್‌ ಮಾಡಿರುವುದು ಸಲ್ಲದು. ಈ ಹಿಂದೆ ಬ್ರಿಟಿಷರಿಗೆ ಪಂಚಮಸಾಲಿ ಸಮಾಜದ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಬಿಸಿ ಮುಟ್ಟಿಸಿದ್ದಾರೆ. ಈ ಸಮಾಜದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಪಂಚಮಸಾಲಿ ಸಂಘದ ಜಿಲ್ಲಾ ಪ್ರತಿನಿಧಿ ಬಸವನಗೌಡ ಪಾಟೀಲ್‌ ಹೇಳಿದರು.

ಇಲ್ಲಿನ ಪಂಚಮಸಾಲಿ ಸಂಘವು ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿಸಿ, ದೌರ್ಜನ್ಯ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಯಾವ ಸಮಾಜದ ವಿರುದ್ಧ ಮಾಡುತ್ತಿಲ್ಲ. ಸಂವಿಧಾನ ಬದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಮಾಜದ ಕೊಡುಗೆ ಇದೆ. 8ರಿಂದ 10 ಶಾಸಕರಿದ್ದರೂ ಮೈಮರೆತಿದ್ದಾರೆ. ಸಮಾಜಕ್ಕೆ ಕುತ್ತು ಬಂದಾಗ ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಸರ್ಕಾರ ಕೂಡಲೇ ಹೋರಾಟಗಾರರ ಮೇಲಿನ ಕೇಸ್‌ ವಾಪಸ್‌ ಪಡೆಯಬೇಕೆಂದು ಆಗ್ರಹಿಸಿದರು.

ವಕೀಲ ಎಸ್‌.ಬವರಾಜ ಮಾತನಾಡಿ, ಪಂಚಮಸಾಲಿಗೆ 2ಎ ಮೀಸಲಾತಿ ನೀಡುವುದು, ಸಂವಿಧಾನ ಬಾಹಿರ ಎನ್ನುವ ಸಿಎಂ ಸಿದ್ದರಾಮಯ್ಯ, ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ನೀಡುತ್ತೇವೆಂದು ನೀಡಿದ ಭರವಸೆ ಎಲ್ಲಿ ಹೋಯ್ತು? ಮಾತು ಕೊಟ್ಟ ಮರೆತ ನೀವು ಹೋರಾಟಗಾರರ ಮೇಲೆ ಲಾಠಿ ಬೀಸಿ ಹಲ್ಲೆ ಮಾಡಿದ್ದೀರಿ, ಹೋರಾಟದ ಹಕ್ಕು ಕಿತ್ತುಕೊಳ್ಳುವ ಈ ಸರ್ಕಾರಕ್ಕೆ ಮುಂದಿನ ದಿನ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಮಾಜದ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ನಿಮ್ಮ ಗೊಡ್ಡು ಬೆದರಿಕೆಗೆ ಸಮಾಜ ಎಂದಿಗೂ ಬಗ್ಗುವುದಿಲ್ಲ ಎಂದರು.

ಪುನೀತ್‌ ದೊಡ್ಮನಿ, ಎಂ.ಗಂಗಾಧರ, ರಾಜೇಂದ್ರ ಪ್ರಸಾದ್‌, ಬಾವಿಮನಿ ಕೊಟ್ರೇಶ ಮಾತನಾಡಿದರು.

ಸಮಾಜದ ಗೌರವಾಧ್ಯಕ್ಷ ಓಲಿ ಈಶಪ್ಪ, ಅಧ್ಯಕ್ಷ ಕೆ.ಎಸ್‌. ಶಾಂತನಗೌಡ, ಕೆ.ಶಿವಮೂರ್ತಿ, ಮಹೇಶ ಒಡೆಯರ್‌, ಬಿ.ನೀಲನಗೌಡ, ಡಿ.ಎಚ್‌.ಆನಂದ, ರಾಕೇಶ ಸೊಪ್ಪಿನ, ಹಕ್ಕಂಡಿ ಮಹದೇವ, ಕೆ.ಪತ್ರೇಶ, ಬೀರಬ್ಬಿ ಮಂಜುನಾಥ, ವಿ.ಚಂದ್ರಮೌಳಿ, ಪಿ.ಲೋಕನಾಥ, ಪಿ.ಶಿವಕುಮಾರ, ಗಡ್ಡಿ ಪತ್ರೆಪ್ಪ, ಕೆ.ಬನ್ನೆಪ್ಪ, ಗಡಗಿ ಕೃಷ್ಣಪ್ಪ, ಕೆ.ಬಸವರಾಜ, ಹಣ್ಣಿ ಶಶಿಧರ, ಕೆ.ಬಿ.ವೀರಭದ್ರಪ್ಪ ಸೇರಿದಂತೆ ನೂರಾರು ಜನ ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನಗೌಡ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮನ ವೃತ್ತದಿಂದ, ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ಮಾಡುತ್ತಾ, ಸರ್ಕಾರದ ಕ್ರಮವನ್ನು ಖಂಡಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Share this article