ರೋಹಿತ್ ಆತ್ಮಹತ್ಯೆ ಖಂಡಿಸಿ ಧರಣಿ:15 ವಿದ್ಯಾರ್ಥಿಗಳ ಮೇಲಿನ ಕೇಸ್‌ ರದ್ದು

KannadaprabhaNewsNetwork |  
Published : Oct 08, 2026, 03:45 AM IST
ಜಿಎಲ್ | Kannada Prabha

ಸಾರಾಂಶ

ವಿದ್ಯಾರ್ಥಿ ರೋಹಿತ್‌ ವೇಮುಲಾ ಆತ್ಮಹತ್ಯೆ ಘಟನೆ ಖಂಡಿಸಿ 2016ರಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ 15 ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಅಕ್ರಮ ಕೂಟ ಹಾಗೂ ನಿಷೇಧಾಜ್ಞೆ ಉಲ್ಲಂಘನೆ ಸೇರಿದಂತೆ ಇನ್ನಿತರ ಅಪರಾಧಗಳ ಸಂಬಂಧ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯಾರ್ಥಿ ರೋಹಿತ್‌ ವೇಮುಲಾ ಆತ್ಮಹತ್ಯೆ ಘಟನೆ ಖಂಡಿಸಿ 2016ರಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ 15 ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಅಕ್ರಮ ಕೂಟ ಹಾಗೂ ನಿಷೇಧಾಜ್ಞೆ ಉಲ್ಲಂಘನೆ ಸೇರಿದಂತೆ ಇನ್ನಿತರ ಅಪರಾಧಗಳ ಸಂಬಂಧ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಕಬ್ಬನ್‌ ಪಾರ್ಕ್‌ ಠಾಣಾ ಪೊಲೀಸರು ದಾಖಲಿಸಿರುವ ದೋಷಾರೋಪ ಪಟ್ಟಿ ಮತ್ತು ಆ ಕುರಿತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೊಯಿಲಾ ಗ್ರಾಮದ ಮೊಹಮ್ಮದ್‌ ತುಫೈಲ್‌ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ಪೀಠ, ಬೆಂಗಳೂರಿನ ಸಭೆಗಳು ಮತ್ತು ಸಾರ್ವಜನಿಕ ಮೆರವಣಿಗೆಗಳ ಪರವಾನಗಿ ಹಾಗೂ ನಿಯಂತ್ರಣ ಆದೇಶ-2009 ಪ್ರಕಾರ ಒಂದೇ ಸ್ಥಳದಲ್ಲಿ ಸಭೆ, ಪ್ರತಿಭಟನೆ ಅಥವಾ ಸಾರ್ವಜನಿಕ ಭಾಷಣ ನಡೆಸುವ ಉದ್ದೇಶದಿಂದ 250ಕ್ಕಿಂತ ಅಧಿಕ ಜನರು ಸೇರುವುದಾದರೆ ಮಾತ್ರ ಪೂರ್ವಾನುಮತಿ ಅಗತ್ಯ. ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿಯೇ ಪ್ರತಿಭಟನೆಯಲ್ಲಿ 100ರಿಂದ 150 ವಿದ್ಯಾರ್ಥಿಗಳು ಭಾಗವಹಿಸಿದ್ದರೆಂದು ಉಲ್ಲೇಖಿಸಲಾಗಿದೆ. ಇದರಿಂದ ಅರ್ಜಿದಾರರು ಯಾವ ನಿಯಮ ಅಥವಾ ಕಾನೂನು ನಿಬಂಧನೆ ಉಲ್ಲಂಘಿಸಿದ್ದಾರೆಂಬುದನ್ನು ಆರೋಪಪಟ್ಟಿಯಲ್ಲಿ ಸ್ಪಷ್ಟಪಡಿಸಿಲ್ಲ. ಅಕ್ರಮ ಕೂಟ ಅಪರಾಧ ಸಾಬೀತುಪಡಿಸಲು ತನಿಖಾಧಿಕಾರಿಗಳು ವಿಫಲರಾಗಿರುವುದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಆದೇಶಿಸಿದೆ.

ಪ್ರಕರಣದ ವಿವರಜಾತಿ ತಾರತಮ್ಯದ ಆರೋಪಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೋಹಿತ್‌ ವೇಮುಲಾ ಸಾವನ್ನು ಖಂಡಿಸಿ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಪೂರ್ವಾನುಮತಿ ಪಡೆಯದೆ ಗುಂಪು ಸೇರಿ ಘೋಷಣೆಗಳನ್ನು ಕೂಗಿದ್ದ ವಿದ್ಯಾರ್ಥಿಗಳು ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕಬ್ಬನ್‌ ಪಾರ್ಕ್‌ ಠಾಣಾ ಪೊಲೀಸರು 15 ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಅಕ್ರಮ ಕೂಟ, ಸಾರ್ವಜನಿಕ ಮಾರ್ಗಕ್ಕೆ ಅಡಚಣೆ ಉಂಟುಮಾಡಿದ, ಅನಧಿಕೃತ ನಿರ್ಬಂಧ ಅಪರಾಧದ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ ನಂತರ ತನಿಖೆ ಪೂರ್ಣಗೊಳಿಸಿ 2016ರ ಜು.20ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾಪಪಟ್ಟಿ ಸಲ್ಲಿಸಿದ್ದರು. ಅದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಟ್‌ ವಿಚಾರಕ್ಕೆ ಗಲಾಟೆ: ಪೊಲೀಸ್‌ಸೇರಿ 7 ಮಂದಿ ವಿರುದ್ಧ ಎಫ್ಐಆರ್‌
ಫುಟ್‌ಪಾತ್‌ನಲ್ಲಿದ ಟೀಸಿ ಸ್ಫೋಟ: ಪಾದಚಾರಿಗೆ ಗಾಯ