ಗಂಗಾವತಿ: ರಾಯಚೂರು ನಗರದ ಎಲ್‌ಬಿಎಸ್ ನಗರದಲ್ಲಿ ಕಿರಾಣಿ ಅಂಗಡಿ ಮಾಲೀಕ ಬಾಪೂರು ನರಸಿಂಹ ಅವರನ್ನು ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ, ಗಂಗಾವತಿ ತಾಲೂಕು ಆರ್ಯವೈಶ್ಯ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಆನಂತರ ಮಾತನಾಡಿದ ರಾಘವೇಂದ್ರ ಶ್ರೇಷ್ಠಿ, ರಾಯಚೂರಿನ ಎಲ್‌ಬಿಎಸ್ ನಗರದ ಕಿರಾಣಿ ಅಂಗಡಿ ಮಾಲೀಕ ಬಾಪೂರು ನರಸಿಂಹ ಅವರ ಬಳಿ ಆರೋಪಿ ತಿಲಕ್ ಸಿಂಗ್ ಚಹಾ, ಗುಟ್ಕಾ ಹಾಗೂ ಸಿಗರೇಟ್‌ಗಳನ್ನು ಸಾಲವಾಗಿ ಕೇಳಿದ್ದಾನೆ. ಈಗಾಗಲೇ ಹಳೆಯ ಬಾಕಿ ಇದ್ದ ಕಾರಣ ನರಸಿಂಹ ಅವರು ಎರಡು ಸಿಗರೇಟ್‌ಗಳನ್ನು ನೀಡಲು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಆರೋಪಿ, ಅಂಗಡಿಯ ಮುಂದೆ ಕಸ ಗುಡಿಸುತ್ತಿದ್ದ ನರಸಿಂಹ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಕ್ಷುಲ್ಲಕ ಕಾರಣಕ್ಕೆ ಅಮಾಯಕ ವ್ಯಾಪಾರಿಯ ಪ್ರಾಣ ತೆಗೆದಿರುವುದು ಅತ್ಯಂತ ಖಂಡನೀಯ. ಇಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜದಲ್ಲಿ ಕಾನೂನಿನ ಭಯ ಮೂಡಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮೃತ ನರಸಿಂಹ ಅವರ ಕುಟುಂಬಕ್ಕೆ ಸರ್ಕಾರ ₹50 ಲಕ್ಷ ಪರಿಹಾರ ನೀಡಬೇಕು. ಅಲ್ಲದೆ, ವ್ಯಾಪಾರಿಗಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಘವೇಂದ್ರ ಶ್ರೇಷ್ಠಿ ಆಗ್ರಹಿಸಿದರು.ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ, ಮಹಿಳಾ ಘಟಕದ ಅಧ್ಯಕ್ಷೆ ಆರ್. ರೂಪರಾಣಿ, ಸಮಾಜದ ಉಪಾಧ್ಯಕ್ಷ ಜಿ. ಸುರೇಶ, ಕಾರ್ಯದರ್ಶಿ ಈಶ್ವರ ಶೆಟ್ಟಿ, ಸಮಾಜದ ಮುಖಂಡರಾದ ವೆಂಕಟೇಶ ದರೋಜ, ಡಿ. ರಾಜಕುಮಾರ, ಶ್ರೀಧರ ಹಿರೇಜಂತಕಲ್, ಬಸವರಾಜ ಆರ್., ಅಶೋಕ ಗುಡಿಕೋಟಿ, ಪಾರ್ವತಿ, ಜಿ. ಸತ್ಯನಾರಾಯಣ, ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.