ಪಂಪ್ ಸೆಟ್ ವಿದ್ಯುತ್ ಕಡಿತ ಖಂಡಿಸಿ ಮುಂದುವರಿದ ಅಹೋರಾತ್ರಿ ಧರಣಿ

KannadaprabhaNewsNetwork |  
Published : Feb 23, 2024, 01:49 AM IST
ಅಹೋರಾತ್ರಿ ಧರಣಿ | Kannada Prabha

ಸಾರಾಂಶ

ರೈತರ ಪಂಪ್‌ಸೆಟ್‌ ವಿದ್ಯುತ್‌ ಸಂಪರ್ಕ ಕಡಿತ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರವೂ ಮುಂದುವರಿದಿದೆ. ಮಡಿಕೇರಿ ಚೆಸ್ಕಾಂ ಕಚೇರಿಯ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರು ಬೇಡಿಕೆ ಈಡೇರುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕಾಫಿ ಬೆಳೆಗಾರರ 10 ಹೆಚ್.ಪಿ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಎರಡನೇ ದಿನವಾದ ಗುರುವಾರವೂ ಮುಂದುವರೆಸಿದೆ.ನಗರದ ಚೆಸ್ಕಾಂ ಕಚೇರಿಯ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರು ಬೇಡಿಕೆ ಈಡೇರುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಆದೇಶದ ಪ್ರತಿ ಇಲ್ಲದೆ, ಕೊಡಗಿನ ಸಣ್ಣ ರೈತರ ಜಮೀನುಗಳಿಗೆ ಅತಿಕ್ರಮ ಪ್ರವೇಶ ಮಾಡಿ ಮೋಟರ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಸರ್ಕಾರ ಕಾಫಿ ಬೆಳೆಗಾರರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವಾರು ಬಾರಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರವಾಗಲಿ ಈಗಿನ ಕಾಂಗ್ರೆಸ್ ಸರ್ಕಾರವಾಗಲಿ ರೈತಪರವಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.ಸರ್ಕಾರ ಬೆಳೆಗಾರರನ್ನು ಬೀದಿಗೆಳೆಯುವುದು ಬೇಡ, ಈಗಾಗಲೇ ಪ್ರಾಣಿ ಮಾನವ ಸಂಘರ್ಷದಿಂದ ಸಾಕಷ್ಟು ಕಷ್ಟ ನಷ್ಟಗಳು ಎದುರಾಗಿದೆ. ಅಲ್ಲದೆ ಅಕಾಲಿಕ ಮಳೆ, ಬೆಳೆಹಾನಿಯಿಂದಾಗಿಯೂ ರೈತರು ಕಂಗಾಲಾಗಿದ್ದಾರೆ. ಹೀಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ತೀವ್ರ ತರದ ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಯಾರೂ ಕೇಳಿಲ್ಲ, ಸ್ವಾರ್ಥಕ್ಕಾಗಿ ಉಚಿತವಾಗಿ ನೀಡಲಾಗುತ್ತಿದೆ. ನಾವು ಕಳೆದ 20 ವರ್ಷಗಳಿಂದಲೂ ಹೋರಾಟ ನಡೆಸುತ್ತಾ ಬಂದಿದ್ದರೂ ಕೃಷಿಗೆ ಉಚಿತ ವಿದ್ಯುತ್ ನೀಡಿಲ್ಲ. ಇತರ ಬೆಳೆಗಳಂತೆ ಕಾಫಿ ಬೆಳೆಗೂ ಸೌಲಭ್ಯ ಕಲ್ಪಿಸಬೇಕು. ಕಾಫಿ ಬೆಳೆಗಾರರ 10 ಹೆಚ್.ಪಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯಲಾಗುವುದು ಎಂದರು.ಇದೇ ಸಂದರ್ಭ ಸಂಘದ ಪದಾಧಿಕಾರಿಗಳು ವಿದ್ಯುತ್ ಇಲಾಖೆಯ ಅಧಿಕಾರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.ಈ ಕುರಿತು ಪ್ರತಿಕ್ರಿಯಿಸಿರುವ ಸೆಸ್ಕ್ ಕಾರ್ಯ ನಿರ್ವಾಹಕ ಅಧಿಕಾರಿ, ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸುಮಾರು 29 ಸಾವಿರ ಕೋಟಿ ರು. ಬಿಲ್ ಬಾಕಿ ಇರುವ ಹಿನ್ನೆಲೆ ನಾವು ನಮ್ಮ ಸಂಸ್ಥೆಯ ನಿಯಮಾನುಸಾರ ವಿದ್ಯುತ್ ಕಡಿತ ಗೊಳಿಸಿದ್ದೇವು. ಇದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ನಿನ್ನೆಯಿಂದ ನಮ್ಮ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ನಿರ್ದೇಶನದಂತೆ ಕಡಿತಗೊಳಿಸಿರುವ ಪಂಪ್ ಸೆಟ್ ವಿದ್ಯುತ್ ಸಂಪರ್ಕವನ್ನು ರಿಕನೆಕ್ಟ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.ರೈತ ಮುಖಂಡ ಹೇರೂರು ಚಂದ್ರಶೇಖರ್, ವಿರಾಜಪೇಟೆ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಯ್ಯ, ಸದಸ್ಯರಾದ ಗೌತಮ್, ಅರುಣ್‌ ಕುಮಾ‌ರ್, ಶಾಶ್ವತ್, ಅಯ್ಯಣ್ಣ ಸೇರಿದಂತೆ ಜಿಲ್ಲೆಯ ವಿವಿಧ ಕಡೆಯ ರೈತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!