ಶಿರಹಟ್ಟಿ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಹಗಲು ೭ ತಾಸು ತ್ರಿಫೇಸ್ ವಿದ್ಯುತ್ ಹಾಗೂ ರಾತ್ರಿ ಸಿಂಗಲ್‌ಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ರೈತರು ಹೆಸ್ಕಾಂ ಕಾರ್ಯಾಲಯದ ಎದುರು ರಸ್ತೆಗೆ ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ೩ ತಾಸು ರಸ್ತೆತಡೆ ನಡೆಸಿ ಪ್ರತಿಭಟಿಸಿದರು.ಈ ವೇಳೆ ರೈತ ಮುಖಂಡ ದೇವಪ್ಪ ಲಮಾಣಿ, ಮಹಾರುದ್ರಯ್ಯ ಲಕ್ಕುಂಡಿ ಮಾತನಾಡಿ, ಈಗಾಗಲೇ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಅತ್ಯಂತ ಅವಶ್ಯಕವಾಗಿದ್ದು, ಅನಿಯಮಿತ ಹಾಗೂ ಕಡಿಮೆ ಅವಧಿಯ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.ಪ್ರಸ್ತುತ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ತ್ರಿಫೇಸ್ ವಿದ್ಯುತ್ ದೊರೆಯದ ಪರಿಣಾಮ ಬೆಳೆಗಳಿಗೆ ಅಗತ್ಯ ಸಮಯದಲ್ಲಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಮಳೆ ಕೈಕೊಟ್ಟಿರುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಯೂ ಎದುರಾಗಿರುವುದರಿಂದ ಬೆಳೆಗಳು ಒಣಗುವ ಆತಂಕ ರೈತರನ್ನು ಕಾಡುತ್ತಿದೆ. ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುವುದರಿಂದ ವಿಷ ಜಂತುಗಳ ಭಯದ ನಡುವೆ ಜಮೀನುಗಳಿಗೆ ತೆರಳಿ ನೀರು ಹಾಯಿಸುವ ಅನಿವಾರ್ಯತೆ ಎದುರಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.ಹಗಲು ೭ ತಾಸು ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ರಾತ್ರಿ ಅವಧಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಸಿಂಗಲ್‌ಫೇಸ್ ವಿದ್ಯುತ್ ನೀಡಬೇಕು. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಪರ್ಯಾಯ ಸಮಯದಲ್ಲಿ ವಿದ್ಯುತ್ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದರು.ಯಾವುದೇ ನೆಪ ಹೇಳದೆ ಹೆಸ್ಕಾಂ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿತ ಅವಧಿಯಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕೊರತೆಯಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈಗಾಗಲೇ ಕೃಷಿ ವೆಚ್ಚ ಹೆಚ್ಚಾಗಿರುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಯಿಂದ ಬೆಳೆ ಹಾನಿಯಾದರೆ ರೈತರ ಬದುಕು ಮತ್ತಷ್ಟು ದುಸ್ತರವಾಗಲಿದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಸಮರ್ಪಕ ವಿದ್ಯುತ್ ಪೂರೈಕೆ ಖಚಿತಪಡಿಸಿ, ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವೆಂಕಪ್ಪ ಪವಾರ, ಕೇಶವ ಕಾಳಪ್ಪ ಅಂಗಡಿ, ಕಾಳಪ್ಪ ಡಾಕಪ್ಪ ಲಮಾಣಿ, ಕೃಷ್ಣಾ ನೇಮಪ್ಪ ಲಮಾಣಿ, ವೀರಣ್ಣ ಕೊಡ್ಲಿವಾಡ, ಮನೋಜ ದೇಶಪಾಂಡೆ, ಮುತ್ತು ಮಠಪತಿ, ಈರಣ್ಣ ಮಠಪತಿ, ಮಲ್ಲಪ್ಪ ಲಕ್ಷ್ಮೇಶ್ವರ, ನಿಂಗಪ್ಪ ಕುರ್ತಕೋಟಿ, ಮಂಜುನಾಥ ಗೌಡರ, ಬಸಣ್ಣ ಅಡರಕಟ್ಟಿ, ಚಂದ್ರು ಪೋತರಾಜ, ಹೇಮಂತ ಗೂರಪ್ಪ ಲಮಾಣಿ, ನಾನಪ್ಪ ಜಾಪಣ್ಣ ಲಮಾಣಿ ಪ್ರತಿಭಟನೆಯಲ್ಲಿ ಇದ್ದರು.