ಶಿಗ್ಗಾಂವಿಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಹಿಂದೂ ಬಾಂಧವರಿಗೆ ಆದಷ್ಟು ನೋವು ನಮಗೂ ಆಗಿದೆ. ತಪ್ಪಿತಸ್ಥನ ವಿರುದ್ಧ ಹೋರಾಟದಲ್ಲಿ ನಾವೂ ಜೊತೆಯಾಗುತ್ತೇವೆ. ವಿಶ್ವಕ್ಕೆ ಶಾಂತಿ ಸಂದೇಶವನ್ನು ನೀಡಿದ ಪ್ರವಾದಿ ಮಹಮ್ಮದ್ ಅವರ ಹಬ್ಬದಂದು (ಆ. 26) ನೀಡಿರುವ ಬಂದ್ ಕರೆಯನ್ನು ಹಿಂಪಡೆದು, ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಶಿಗ್ಗಾಂವಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ತಿಳಿಸಿದೆ.
ಶಿಗ್ಗಾಂವಿ: ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಹಿಂದೂ ಬಾಂಧವರಿಗೆ ಆದಷ್ಟು ನೋವು ನಮಗೂ ಆಗಿದೆ. ತಪ್ಪಿತಸ್ಥನ ವಿರುದ್ಧ ಹೋರಾಟದಲ್ಲಿ ನಾವೂ ಜೊತೆಯಾಗುತ್ತೇವೆ. ವಿಶ್ವಕ್ಕೆ ಶಾಂತಿ ಸಂದೇಶವನ್ನು ನೀಡಿದ ಪ್ರವಾದಿ ಮಹಮ್ಮದ್ ಅವರ ಹಬ್ಬದಂದು (ಆ. 26) ನೀಡಿರುವ ಬಂದ್ ಕರೆಯನ್ನು ಹಿಂಪಡೆದು, ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಶಿಗ್ಗಾಂವಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ತಿಳಿಸಿದೆ.
ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಕರೆಯಲಾಗಿದ್ದ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮೌಲಾಲಿ ದೊಡ್ಡಮನಿ ಮಾತನಾಡಿ, ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ನಡೆದ ನೋವಿನ ಘಟನೆಯನ್ನು ಶಿಗ್ಗಾಂವಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ಶಾಂತಿ-ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ ಎಂದರು.
ಸದಸ್ಯ ಸಲೀಂ ಅಹ್ಮದ ಫರೋಖಿ ಮಾತನಾಡಿ, ಯಾವುದೇ ಧರ್ಮದ ಆರಾಧನಾ ಸ್ಥಳಗಳ ಪಾವಿತ್ರ‍್ಯಕ್ಕೆ ಧಕ್ಕೆ ತರುವುದು ಅಕ್ಷಮ್ಯ ಅಪರಾಧ. ಕೃತ್ಯ ಎಸಗಿದ ವ್ಯಕ್ತಿ ಯಾರೇ ಆಗಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆದು ಕಾನೂನುಬದ್ಧ ಶಿಕ್ಷೆಯಾಗಬೇಕು ಎಂದು ಸಂಸ್ಥೆ ಒತ್ತಾಯಿಸುತ್ತದೆ.
ದೇವಸ್ಥಾನದಲ್ಲಿ ನಡೆದ ಘಟನೆ ಹಿಂದೂ ಸಮಾಜಕ್ಕೆ ಮಾತ್ರವಲ್ಲದೆ ಮುಸ್ಲಿಂ ಸಮುದಾಯದ ಹಿರಿಯರು ಮತ್ತು ಯುವಕರಿಗೂ ತೀವ್ರ ನೋವುಂಟು ಮಾಡಿದೆ. ಹಿಂದೂ ಸಹೋದರರ ನೋವಿನಲ್ಲಿ ನಾವೂ ಭಾಗಿಯಾಗಿದ್ದು, ನ್ಯಾಯಕ್ಕಾಗಿ ಕಾನೂನುಬದ್ಧವಾಗಿ ನಡೆಯುವ ಪ್ರತಿಯೊಂದು ಹೆಜ್ಜೆಗೆ ಸಂಪೂರ್ಣ ಸಹಕಾರವನ್ನು ಸಂಸ್ಥೆಯ ವತಿಯಿಂದ ನೀಡಲಾಗುವುದು.
ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ಹೊಣೆ ಮಾಡುವುದು ಸರಿಯಲ್ಲ. ಶಿಗ್ಗಾಂವಿಯಲ್ಲಿ ಬಹುಕಾಲದಿಂದ ನೆಲೆಸಿರುವ ಹಿಂದೂ-ಮುಸ್ಲಿಂ ಬಾಂಧವ್ಯ ಮತ್ತು ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ವಿನಂತಿಸುತ್ತೇವೆ. ಆಗಸ್ಟ್ ೨೬ರಂದು ಅಂಜುಮನ್ ಇಸ್ಲಾಂ ಸಂಸ್ಥೆಯ ವತಿಯಿಂದ ಪ್ರವಾದಿ ಮಹಮ್ಮದ್ ಅವರ ಜನ್ಮದಿನದ (ಈದ್ ಮಿಲಾದ್) ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಹಿಂದೂ ಬಾಂಧವರು, ಹಿರಿಯರು ಹಾಗೂ ಯುವಕರು ಭಾಗವಹಿಸಿ ಸಹಕರಿಸಬೇಕು ಎಂದು ಕೋರುತ್ತೇವೆ.
ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು, ಮುಂಬರುವ ಈದ್ ಮಿಲಾದ್ ಕಾರ್ಯಕ್ರಮಕ್ಕೂ ಆಗಮಿಸಿ ಸೌಹಾರ್ದತೆಯ ಸಂಕೇತವಾಗಿ ನಮ್ಮೊಂದಿಗೆ ನಿಲ್ಲಬೇಕು ಎಂಬುದು ಸಂಸ್ಥೆಯ ಪದಾಧಿಕಾರಿಗಳ ಆಶಯವಾಗಿದೆ. ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವೇ ಶಿಗ್ಗಾಂವಿಯ ನಿಜವಾದ ಶಕ್ತಿ. ಪ್ರತಿಯೊಂದು ಧರ್ಮದ ಪವಿತ್ರ ಸ್ಥಳಗಳ ಗೌರವವನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಪ್ರತಿಪಾದಿಸುತ್ತಾ ಬಂದಿದೆ ಎಂದರು.ಈ ಸಂದರ್ಭದಲ್ಲಿ ಅಧ್ಯಕ್ಷ ಮೌಲಾಲಿ ದೊಡ್ಡಮನಿ, ಉಪಾಧ್ಯಕ್ಷ ಖಾಜಾ ಚೂಡಿಗಾರ, ಅಬ್ದುಲ್ ತುಕಲ್ಲಿ, ಸಾಧಿಕ ಸವಣೂರ, ಖಾಜಾ ಶ್ಯಾಬಾಳ, ಮಹ್ಮದಹನೀಪ ಅಂಬೂರ, ಇಮ್ತಿಯಾಜಅಹ್ಮದ ಮುಲ್ಲಾ, ಶಖೀರಅಹ್ಮದ ಬೇಪಾರಿ, ಅತಾಹುಲ್ಲಾಖಾನ ಖಾಜೆಕಾನವರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.