ರೈತ ಚೇತರಿಸಿಕೊಂಡರೆ ಮಾತ್ರ ದೇಶದ ಆರ್ಥಿಕತೆ ಸಮೃದ್ಧಿ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Aug 25, 2026, 02:30 AM IST
ರಾಣಿಬೆನ್ನೂರು ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಿವಿಧ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕೃಷಿ ಕ್ಷೇತ್ರವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರು ಕೇವಲ ಬೆಳೆ ಉತ್ಪಾದಿಸುವವರಷ್ಟೇ ಅಲ್ಲದೆ ಗ್ರಾಹಕರೂ ಆಗಿರುವುದರಿಂದ ಅವರ ಆರ್ಥಿಕ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ಕೃಷಿ ಕ್ಷೇತ್ರವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರು ಕೇವಲ ಬೆಳೆ ಉತ್ಪಾದಿಸುವವರಷ್ಟೇ ಅಲ್ಲದೆ ಗ್ರಾಹಕರೂ ಆಗಿರುವುದರಿಂದ ಅವರ ಆರ್ಥಿಕ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಿವಿಧ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ವಲಯದಲ್ಲಿ ಪ್ರಗತಿಯಾದಾಗ ಮಾತ್ರ ಕೈಗಾರಿಕಾ ಹಾಗೂ ಸೇವಾ ವಲಯಗಳಲ್ಲಿ ಹತ್ತು ಪಟ್ಟು ಹೆಚ್ಚಿನ ಪ್ರಗತಿ ಕಾಣಲು ಸಾಧ್ಯ. ಬೆಳೆ ಉತ್ತಮವಾಗಿ ಬಂದು ರೈತನ ಕೈಯಲ್ಲಿ ಹಣ ಹರಿದಾಡಿದಾಗ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಜೋರಾಗಿ, ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ. ರೈತರು ತಾವೇ ಬೆಳೆದ ಬೆಳೆಯನ್ನು ಮಾರಾಟ ಮಾಡಿ ಬಂದ ಆದಾಯದಿಂದ ಗೊಬ್ಬರ, ಬೀಜ, ಡೀಸೆಲ್, ಪೆಟ್ರೋಲ್ ಹಾಗೂ ಮನೆಗೆ ಬೇಕಾದ ದಿನಬಳಕೆ ವಸ್ತುಗಳನ್ನು ಖರೀದಿಸುತ್ತಾರೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿರುವ ರೈತ ಸಮೂಹ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೆ ಇಡೀ ದೇಶದ ಮಾರುಕಟ್ಟೆ ಜೀವಂತವಾಗಿರುತ್ತದೆ ಎಂದರು.

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲಿನ ಒಕ್ಕೂಟ (ಕೆಎಂಎಫ್) ಹಾಗೂ ಡಿಸಿಸಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ತರಲು ತಾವೇ ಮುಂಚೂಣಿಯಲ್ಲಿದ್ದು ಉಪವಾಸ ಸತ್ಯಾಗ್ರಹ ಮತ್ತು ಬೃಹತ್ ಹೋರಾಟಗಳನ್ನು ನಡೆಸಿದ್ದೇನು. ಜಿಲ್ಲೆಯ ಹಾಲು ಉತ್ಪಾದಕರ ಹಿತ ಕಾಯಲು ತಾವು ಮುಖ್ಯಮಂತ್ರಿಯಾಗಿದ್ದಾಗ ರು.100 ಕೋಟಿ ಅನುದಾನ ನೀಡುವ ಮೂಲಕ ಹಾವೇರಿಯಲ್ಲಿ ಬೃಹತ್ ''''''''ಮೆಗಾ ಡೈರಿ'''''''' ಸ್ಥಾಪನೆಗೆ ಚಾಲನೆ ನೀಡಿದ್ದೇನು. ಸರ್ಕಾರದ ಮೇಲೆ ಅವಲಂಬನೆ ಮಾಡುವುದಕ್ಕಿಂತ ಸ್ವತಃ ತಮ್ಮ ಶ್ರಮ ಮತ್ತು ದುಡಿಮೆಯ ಮೇಲೆಯೇ ನಂಬಿಕೆ ಇಟ್ಟು ಬೆಳೆದದ್ದು ಸಹಕಾರ ಕ್ಷೇತ್ರ. ಸಹಕಾರ ರಂಗವು ಜನರಿಂದ, ಜನರಿಗೋಸ್ಕರ ಇರುವಂತದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸಹಕಾರ ಚಳವಳಿ ಅತ್ಯಂತ ಬಲವಾಗಿದೆ. ಅಲ್ಲಿ ಸಹಕಾರವು ಸರ್ಕಾರವನ್ನು ಆಳುತ್ತದೆ. ಅಲ್ಲಿನ ಸಹಕಾರ ರಂಗದ ನಾಯಕರೇ ಮುಖ್ಯಮಂತ್ರಿ, ಮಂತ್ರಿಗಳಾಗಿ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಆದರೆ ಕರ್ನಾಟಕದಲ್ಲಿ ಸರ್ಕಾರವು ಸಹಕಾರ ರಂಗವನ್ನು ಆಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಕಟ್ಟಿದ ಮಾತ್ರಕ್ಕೆ ಭಾರತ ಸಂಪತ್ಭರಿತ ದೇಶವಾಗುವುದಿಲ್ಲ. ರೈತ ದುಡಿದರೆ ಮಾತ್ರ ನಮ್ಮ ದೇಶ ಸಂಪತ್ಭರಿತ ಹಾಗೂ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಸಾಧ್ಯ. ನಾವು ರೈತರು ಬೆಳೆದ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡುತ್ತೇವೆ. ಕಾರ್ಖಾನೆಗಳ ಉತ್ಪನ್ನಗಳಿಗಿಂತ ಕೃಷಿ ಉತ್ಪನ್ನಗಳೇ ದೇಶದ ಆರ್ಥಿಕತೆಗೆ ಹೆಚ್ಚಿನ ಬಲ ನೀಡುತ್ತವೆ. ನಮ್ಮ ಉತ್ಪನ್ನಗಳ ವಹಿವಾಟು ಹೆಚ್ಚಿಸಲು ಪೂರಕವಾಗಿ ಸಹಕಾರಿ ಸಂಸ್ಥೆಗಳು ನಿರ್ಮಾಣಗೊಂಡಿವೆ ಎಂದರು.

ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ಸೊಸೈಟಿ ವ್ಯಾಪ್ತಿಯಲ್ಲಿ ಸ್ಥಿತಿವಂತ ಸದಸ್ಯರೇ ಹೆಚ್ಚಿದ್ದು, ವ್ಯವಹಾರ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಸದಸ್ಯರು ಸಂಘದಲ್ಲಿ ಹೆಚ್ಚಿನ ಠೇವಣಿ ಇರಿಸಿ, ಅಗತ್ಯ ಸಾಲ ಸೌಲಭ್ಯಗಳನ್ನು ಪಡೆದು ಸಂಘದ ವ್ಯವಹಾರವನ್ನು ಹೆಚ್ಚಿಸಬೇಕು ಎಂದರು.

ಸಂಘದ ಅಧ್ಯಕ್ಷ ಗುರುನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಮಳ್ಳಪ್ಪ ನಿಂಗಜ್ಜನವರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ, ಹಿರೇಮಾಗನೂರ ಸಹಕಾರಿ ಸಂಘದ ಆಡಳಿತಾಧಿಕಾರಿ ಜಗದೀಶಗೌಡ ಪಾಟೀಲ, ಸಂಘದ ನಿರ್ದೇಶಕರು ಹಾಗೂ ಕೆಸಿಸಿ ಬ್ಯಾಂಕ್ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
ಹಗಲು ೭ ತಾಸು ತ್ರಿಫೇಸ್ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ