ಬಳ್ಳಾರಿ: ಚಿತ್ರನಟ ದರ್ಶನ್ ಹಾಗೂ ಸಹಚರರಿಂದ ನಡೆದಿದೆ ಎನ್ನಲಾದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಬಳ್ಳಾರಿ ಜಿಲ್ಲಾ ಪ್ರಜ್ಞಾವಂತ ನಾಗರಿಕರ ವೇದಿಕೆ ಸದಸ್ಯರು ಹಾಗೂ ಸಾರ್ವಜನಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಗಾಂಧಿ ಪ್ರತಿಮೆ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.ಚಿತ್ರದುರ್ಗದ ನಿವಾಸಿ ರೇಣುಕಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಪಟ್ಟಣಗೇರೆ ಶೆಡ್‌ವೊಂದರಲ್ಲಿ ಅಕ್ರಮವಾಗಿ ಕೂಡಿ ಹಾಕಿ, ಅತ್ಯಂತ ಅಮಾನುಷವಾಗಿ ರಾಕ್ಷಸರ ರೀತಿಯಲ್ಲಿ ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಲೆ ಮಾಡಿರುವ ಪ್ರಮುಖ ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಗೌಡ ಹಾಗೂ ಇವರ ಸಹಚರರನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿರುವುದು ಶ್ಲಾಘನೀಯ ಎಂದರು.
ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷಿಯಾಗಬೇಕಾದರೆ ಮತ್ತು ರೇಣುಕಾ ಸ್ವಾಮಿಯ ಕೊಲೆಗೆ ನ್ಯಾಯ ಸಿಗಬೇಕಾದರೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾಗಿದೆ. ಹೀಗಾಗಿ ಈ ಗಂಭೀರ ಪ್ರಕರಣವನ್ನು ನಿವೃತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸುವುದು ಸೂಕ್ತವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆ.ಎಂ. ಮಹೇಶ್ವರ ಸ್ವಾಮಿ ಮಾತನಾಡಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಸಾವಿಗೀಡಾದ ರೇಣುಕಾಸ್ವಾಮಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಪ್ರಮುಖರಾದ ಪಿ.ಬಂಡೇಗೌಡ, ಎಚ್.ಕೆ. ಗೌರಿಶಂಕರ್, ಅರವಿ ಬಸವನಗೌಡ, ಎಂ.ಸಿ. ರಾವ್, ಡಾ.ವಸ್ತ್ರದ, ಕೆ.ಎಂ. ಕೊಟ್ರೇಶ್, ಜಿ.ನೀಲಕಂಠಪ್ಪ, ಎಸ್.ಎಂ. ಷಡಾಕ್ಷರಯ್ಯ, ವೀರಭದ್ರಗೌಡ, ಶ್ರೀಧರಗೌಡ ಜಾಲಿಹಾಳ್, ಜಿತೇಂದ್ರಸ್ವಾಮಿ, ಕೋಳೂರು ಚಂದ್ರಶೇಖರಗೌಡ, ಅಂಬರೇಷಯ್ಯ, ಅಲ್ಲೀಪುರ ಸಿದ್ಧರಾಮಶಾಸ್ತ್ರಿ, ನಟರಾಜ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.