ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jul 25, 2026, 01:45 AM IST
24ಎಚ್ಎಸ್ಎನ್16  :ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ರೈತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ  ಕೋಗೋಡು  - ಮುಡಿಗೆರೆ  ರಸ್ತೆ ತಡೆದು  ಪ್ರತಿಭಟನೆ  ನಡೆಸಿದರು. | Kannada Prabha

ಸಾರಾಂಶ

ಹಗಲು ರಾತ್ರಿ ಎನ್ನದೆ ಕಾಡಾನೆಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ. ಈ ಕಾಡಾನೆಗಳ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಚೀಕನಹಳ್ಳಿ-ಹುನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಜನರು ಮುಂದಿನ ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆನೆಗಳನ್ನು ಸ್ಥಳಾಂತರಿಸಿ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹೆದ್ದಾರಿ ರಸ್ತೆ ತಡೆದು ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ರೈತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೋಗೋಡು - ಮೂಡಿಗೆರೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕಾಫಿ ಬೆಳೆಗಾರರ ಸಂಘದ ಜಿಲ್ಲಾ ನಿರ್ದೇಶಕ ಕೋಗೋಡು ಸಂತೋಷ್ ಮಾತನಾಡಿ, ಅರೇಹಳ್ಳಿ ಹೋಬಳಿಯ ಭಾಗದಲ್ಲಿ 80ಕ್ಕೂ ಹೆಚ್ಚು ಕಾಡಾನೆಗಳು ದಾಳಿ ನಡೆಸುತ್ತಿದ್ದು ನೂರಾರು ಎಕರೆಯಲ್ಲಿ ಬೆಳೆದ ಬೆಳೆ ನಾಶವಾಗುತ್ತಿದೆ. ಅಲ್ಲದೆ ಕಾಡನೆಗಳ ಪುಂಡಾಟಕ್ಕೆ ಅಮಾಯಕ ಜನರು ಬಲಿಯಾಗಿದ್ದಾರೆ. ರೈತರು ತೋಟಕ್ಕೆ ಹೋಗಿ ವಾಪಸ್ ಬರುತ್ತಾರೆ ಎನ್ನುವ ನಂಬಿಕೆ ಇಲ್ಲದಂತಾಗಿದೆ. ಹಗಲು ರಾತ್ರಿ ಎನ್ನದೆ ಕಾಡಾನೆಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ. ಈ ಕಾಡಾನೆಗಳ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಚೀಕನಹಳ್ಳಿ-ಹುನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಜನರು ಮುಂದಿನ ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈಗ ಬಿಡದಿಯಲ್ಲಿ ರೈತರಿಗೆ ಹೇಗೆ ಎಕರೆಗೆ ಎರಡೂವರೆ, ಮೂರು ಕೋಟಿ ಕೊಡುತ್ತಿದ್ದಾರೋ ಹಾಗೇ ನಮಗೂ ಎಕರೆಗೆ ೧ ಕೋಟಿಯಂತೆ ಕೊಟ್ಟರೆ ನಾವೇ ಇಲ್ಲಿಂದ ಸ್ಥಳಾಂತರ ಗೊಳ್ಳುತ್ತೇವೆ. ಇಲ್ಲದಿದ್ದಲ್ಲಿ ಆನೆಗಳನ್ನು ಸ್ಥಳಾಂತರಿಸಿ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹೆದ್ದಾರಿ ರಸ್ತೆ ತಡೆದು ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದರು.ಕಾಫಿ ಬೆಳೆಗಾರರ ಸಂಘದ ತಾಲೂಕು ಕಾರ್ಯದರ್ಶಿ ಗೆಂಡೇಹಳ್ಳಿ ಲೋಕೇಶ್ ಮಾತನಾಡಿ, ೩೦ ವರ್ಷದ ಹಿಂದೆ ಬೆಳೆಸಿದ ಗಿಡಗಳನ್ನೆಲ್ಲ ಆನೆಗಳು ಕಿತ್ತು ಹಾಕಿವೆ. ಮತ್ತೆ ಬೆಳೆಸಬೇಕೆಂದರೆ ಮತ್ತೆ ೩೦ ವರ್ಷ ಬೇಕು. ಕೇರಳದಲ್ಲಿ ವ್ಯಕ್ತಿ ಸತ್ತರೆ ನಮ್ಮ ಆನೆಯಿಂದ ಸತ್ತಿದ್ದಾರೆ ಎಂದು ಮುಖ್ಯಮಂತ್ರಿ ಪರಿಹಾರ ಕೊಡುತ್ತಾರೆ. ಇಲ್ಲಿ ಕೋಟ್ಯಂತರ ರುಪಾಯಿ ಹಾನಿ ಮಾಡಿದರೂ ತಿರುಗಿ ನೋಡುತ್ತಿಲ್ಲ. ಅಧಿಕಾರಿಗಳು ಇಲ್ಲಿನ ಮಾಹಿತಿ ತಿಳಿಸಿ ಸುಮ್ಮನಾಗುತ್ತಾರೆ ಹೊರತು ಮತ್ತೆ ಗಮನ ಹರಿಸುವುದಿಲ್ಲ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ನಾಗೇನಹಳ್ಳಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಚೀಕನಹಳ್ಳಿ- ಹುನುಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಇಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಈಗಾಗಲೇ ಕಾಡಾನೆಗಳ ದಾಳಿಗೆ ಜನರು ಬಲಿಯಾಗಿದ್ದಲ್ಲದೆ, ನೂರಾರು ಎಕರೆ ಬೆಳೆ ನಾಶವಾಗಿದೆ. ಆದ್ದರಿಂದ ಸರ್ಕಾರಕ್ಕೆ ೮ ದಿನದ ಗಡುವು ನಿಡುತಿದ್ದೇವೆ. ಅಷ್ಟರೊಳಗೆ ಕಾಡಾನೆಗಳನ್ನು ಶಾಶ್ವತವಾಗಿ ಇಲ್ಲಿಂದ ಓಡಿಸಬೇಕು. ಇಲ್ಲದಿದ್ದಲ್ಲಿ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.ಪ್ರತಿಭಟನೆಯಲ್ಲಿ ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಆನಂತರಾಜು, ಗ್ರಾಪಂ ಅಧ್ಯಕ್ಷ ಹರೀಶ್, ಬೆಳೆಗಾರರಾದ ರಮೇಶ್ ಸುವರ್ಣ, ಸವೀನ್, ಸುನೀಲ್, ವಿಶ್ವನಾಥ್, ಗೋಪಿ, ಮಂಜುನಾಥ ದೀಕ್ಷಿತ್, ಸಂದೀಪ, ಶಶಿಕಲಾ, ಯೋಗೇಂದ್ರ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ
ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ