ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಳೆದ ವರ್ಷ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲವನ್ನು ರಾಜ್ಯ ಎದುರಿಸಿತ್ತು. ಯಾವುದೇ ಅರ್ಥಪೂರ್ಣ ಬರ ಪರಿಹಾರ ಕ್ರಮಗಳಿಲ್ಲದೆ ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ರೈತಾಪಿ ಸಮುದಾಯಕ್ಕೆ ಬಿತ್ತನೆ ಬೀಜ-ರಸಗೊಬ್ಬರಗಳ ಬೆಲೆ ಏರಿಕೆ ಇನ್ನಷ್ಟು ಆರ್ಥಿಕ ಹೊರೆಯಾಗಿದೆ. ಈ ಕೂಡಲೇ ಏರಿಸಿರುವ ಬೆಲೆಗಳನ್ನು ಇಳಿಸಬೇಕು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ರೈತರನ್ನು ಬೀಜ-ಗೊಬ್ಬರದ ವ್ಯಾಪಾರಿಗಳು ಶೋಷಣೆ ಮಾಡದಂತೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.ಬಿತ್ತನೆ ಬೀಜ-ರಸಗೊಬ್ಬರ ಬೆಲೆಗಳನ್ನು ಇಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಕಳಪೆ ಹಾಗೂ ನಕಲಿ ಬಿತ್ತನೆ ಬೀಜ-ರಸಗೊಬ್ಬರಗಳ ಮಾರಾಟವನ್ನು ತಡೆಗಟ್ಟಬೇಕು. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎನ್.ಎಲ್.ಭರತ್‌ರಾಜ್, ವಿಶ್ವನಾಥ್ ಸೊಳ್ಳೇಪುರ, ಎನ್.ಲಿಂಗರಾಜಮೂರ್ತಿ, ಟಿ.ಎಸ್.ಸಿದ್ದೇಗೌಡ, ಎಂ.ಸಿ. ಮಹದೇವು, ಗುರುಸ್ವಾಮಿ, ಸತೀಶ್ ಗುಳಘಟ್ಟ, ಎ.ಎಲ್.ಶಿವಕುಮಾರ್, ಮರಿಲಿಂಗೇಗೌಡ, ಮುತ್ತುರಾಜು ಇತರರಿದ್ದರು.