ಹರಪನಹಳ್ಳಿ: ದೇಶದ ಸುರಕ್ಷಿತೆ ಮತ್ತು ಯುವಜನರಿಗೆ ಉದ್ಯೋಗ ಭದ್ರತೆಯ ದೃಷ್ಟಿಯಿಂದ ಅಗ್ನಿಪಥ ಯೋಜನೆ ಕೈಬಿಡಬೇಕು. ಸೇನೆಯಲ್ಲಿ ಈ ಹಿಂದಿನಂತೆ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಶನ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಭಾರತೀಯ ಸೇನೆ ದೇಶದ ಎರಡನೇ ದೊಡ್ಡ ಉದ್ಯೋಗ ನೀಡುವ ಸಂಸ್ಥೆಯಾಗಿದೆ. ದೇಶದ ಯುವಕರು ದೇಶ ಪ್ರೇಮದ ಹಿನ್ನೆಲೆಯಲ್ಲಿ ಸೈನ್ಯಕ್ಕೆ ಸೇರುವ ತುಡಿತದ ಮನಸ್ಸಿನವರು. ದೇಶದ ರಕ್ಷಣೆ ಜತೆಗೆ ಕುಟುಂಬ ನಿರ್ವಹಣೆಗಾಗಿ ಸೇನೆಯು ಉದ್ಯೋಗ ಭದ್ರತೆ ನೀಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತರುವ ಮೂಲಕ ಯುವಕರಿಗೆ ಒದಗುತ್ತಿದ್ದ ಉದ್ಯೋಗ ಭದ್ರತೆಯನ್ನು ನಾಶಗೊಳಿಸಿದೆ. ಹಾಗೇ ದೇಶದ ಸುರಕ್ಷತೆಯನ್ನು ಅಪಾಯಕ್ಕೆ ತಂದು ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಾವಧಿ ಸೇನೆಯಲ್ಲಿ ನಿಯೋಜಿಸುವುದು ದೇಶದ ರಕ್ಷಣಾ ದೃಷ್ಟಿಯಿಂದಲೂ ಸೂಕ್ತವಲ್ಲ ಎನ್ನುವಂತಹ ಅಭಿಪ್ರಾಯ ಸೇನಾ ಉನ್ನತ ಅಧಿಕಾರಿಗಳ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದ್ದು ಯೋಜನೆಯ ಅಪಾಯವನ್ನು ತಿಳಿಸುತ್ತದೆ. ದೇಶದ ಸುರಕ್ಷಿತೆಯ ದೃಷ್ಟಿಯಿಂದ ಮತ್ತು ಯುವಜನರಿಗೆ ಉದ್ಯೋಗದ ಭದ್ರತೆಯ ದೃಷ್ಟಿಯಿಂದ ಅಗ್ನಿಪಥ ಯೋಜನೆಯನ್ನು ಕೈಬಿಡಬೇಕು ಮತ್ತು ಸೇನೆಯಲ್ಲಿ ಈ ಹಿಂದಿನಂತೆ ನೇಮಕಾತಿ ಮಾಡುವಂತೆ ಅಖಿಲ ಭಾರತ ಯುವಜನ ಫೆಡರೇಷನ್ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಯುವಜನ ಫೆಡರೇಷನ್ ಮುಖಂಡರಾದ ಹಾವೇರಿ ದೊಡ್ಡಬಸವರಾಜ್, ರಮೇಶ್ ನಾಯ್ಕ್ಕ, ಡಿ.ಎಚ್. ಅರುಣ್, ಡಿ.ಹರೀಶ್, ಡಿ.ಗುರುಬಸವರಾಜ್, ನಂದೀಶ್ ತರ್ಲಾಗಟ್ಟಿ ಉಪಸ್ಥಿತರಿದ್ದರು.