ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಷಡ್ಯಂತ್ರ, ಕರ್ಮಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Aug 13, 2025, 12:30 AM IST
12ಎಚ್‌ವಿಆರ್2, 2ಎ,2ಬಿ- | Kannada Prabha

ಸಾರಾಂಶ

ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಅಪಪ್ರಚಾರಗಳನ್ನು ಧರ್ಮಾಧಿಕಾರಿಯವರ ಕೆಲಸ ಕಾರ್ಯಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಾ ಸಮಾಜವನ್ನು ಒಡೆಯುವ ಹುನ್ನಾರಗೈಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಹಾವೇರಿ: ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ತರಲು ಷಡ್ಯಂತ್ರ ಮಾಡುತ್ತಿರುವವರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿ ಧರ್ಮಸ್ಥಳ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಧರ್ಮಸ್ಥಳ ಕ್ಷೇತ್ರದ ಭಕ್ತಾಭಿಮಾನಿಗಳು ಮಾತನಾಡಿ, ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ಅನಾದಿ ಕಾಲದಿಂದಲೂ ನಮ್ಮ ಪೂರ್ವಿಕರು ಭಕ್ತಿ, ಶ್ರದ್ಧೆಯಿಂದ ಮನೆ ಮನಗಳಲ್ಲಿ ಪೂಜಿಸಿಕೊಂಡು ಬಂದಿದ್ದಾರೆ. ನಾವು ಕೂಡ ಈ ಪರಂಪರೆ ಮುಂದುವರಿಸಿಕೊಂಡು ಬಂದಿದ್ದೇವೆ. ರಾಜ್ಯದ ಅತ್ಯಂತ ಪ್ರಾಚೀನ ಮತ್ತು ಪುಣ್ಯಕ್ಷೇತ್ರವೆಂದೇ ಹೆಸರುವಾಸಿಯಾಗಿರುವ ದೇವಾಲಯಗಳಲ್ಲಿ ಇದೂ ಒಂದು. ಈ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ಸ್ವಾಮಿಯಲ್ಲಿ ಭಕ್ತರು ಬೇಡಿಕೊಂಡ ಇಷ್ಟಾರ್ಥಗಳು ನೆರವೇರುವುದು ಎಂಬ ಪ್ರತೀತಿಯೂ ಇದೆ. ಇಂತಹ ದೇವಾಲಯದ ಮೇಲೆ ಮತ್ತು ಅದರ ಧರ್ಮಾಧಿಕಾರಿಗಳ ಮೇಲೆ ಕಳಂಕ ತರುವ ಪ್ರಯತ್ನಗಳನ್ನು ಸಹಿಸಲಾಗದು ಎಂದರು. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರಬೇಕೆಂದು ಹೋರಾಟ ಮಾಡುವ ನೆಪದಲ್ಲಿ ಮಹೇಶ ಶೆಟ್ಟಿ ತಿಮರೋಡಿ, ಜಯಂತ ಟಿ., ಗಿರೀಶ ಮಟ್ಟೆಣ್ಣವರ, ಸಂತೋಷ ಶೆಟ್ಟಿ, ಸಮೀರ್ ಎಂ.ಡಿ. ಸಹಚರರು ಸೇರಿ ಶತಾಯಗತಾಯ ವ್ಯವಸ್ಥಿತ ಷಡ್ಯಂತ್ರಗಳನ್ನು ರೂಪಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ವಿಡಿಯೋ ತುಣುಕುಗಳನ್ನು ಬಿತ್ತರಿಸುತ್ತಿದ್ದಾರೆ.

ಇದರಿಂದ ಕ್ಷೇತ್ರದ ಭಕ್ತರ ಮನಸ್ಸಿಗೆ ಅತೀವ ನೋವಾಗುತ್ತಿದೆ. ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಅಪಪ್ರಚಾರಗಳನ್ನು ಧರ್ಮಾಧಿಕಾರಿಯವರ ಕೆಲಸ ಕಾರ್ಯಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಾ ಸಮಾಜವನ್ನು ಒಡೆಯುವ ಹುನ್ನಾರಗೈಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿದರು. ಸತತ ಅಪಪ್ರಚಾರಗಳಿಂದ ಸಮಾಜದ ಒಂದು ವರ್ಗವು ಇದನ್ನು ನಂಬಿಕೊಂಡು ಇವರಿಗೆ ಸಹಕರಿಸುವುದು ಮತ್ತು ಧರ್ಮಸ್ಥಳದ ಭಕ್ತರಾದ ನಮ್ಮನ್ನು ಸಮಾಜದಲ್ಲಿ ಕೀಳಾಗಿ ಬಿಂಬಿಸುತ್ತಿರುವುದು ಸಹಿಸದಂತಾಗಿದೆ. ಈಗಾಗಲೇ ಅನಾಮಿಕ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನುಸ್ವಾಗತಿಸಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಪ್ರಕಾಶ ಶೆಟ್ಟಿ, ಕಲ್ಯಾಣಕುಮಾರ ಶೆಟ್ಟರ್, ರುದ್ರೇಶ ಚಿನ್ನಣ್ಣನವರ, ಬಸವರಾಜ ಅರಬಗೊಂಡ, ಮುರಿಗೆಪ್ಪ ಶೆಟ್ಟರ್, ಎಸ್.ಎ. ವಜ್ರಕುಮಾರ, ಪ್ರಭಾಕರ ಮಂಗಳೂರ, ಗದಿಗೆಪ್ಪ ಕುರವತ್ತಿ, ವೀರಭದ್ರ ಗೊಡಚಿ, ಶಿವಾನಂದ ಮ್ಯಾಗೇರಿ, ರಮೇಶ ಆನವಟ್ಟಿ, ಅಶೋಕ ಮರ್ಚರಡ್ಡೇರ, ಅಶೋಕ ಶೆಟ್ಟಿ, ಬುಳ್ಳಪ್ಪ ಬಣಕಾರ, ಚೆನ್ನಪ್ಪ ಮಲ್ಲಾಡದ, ರುದ್ರಗೌಡ ಪಾಟೀಲ, ಭರಮಪ್ಪ ಬ್ಯಾಡಗಿ, ಸತೀಶ ಸಂದಿಮನಿ, ಕಿರಣ ಶೆಟ್ಟಿ, ಎನ್.ಆರ್. ಬಸೇಗಣ್ಣಿ, ಎನ್.ಎಂ. ಅರ್ಕಾಚಾರಿ, ಬಸವರಾಜ ಹಾದಿಮನಿ, ವಿ.ಬಿ. ಅತ್ತಿಗೇರಿ, ಮಧುಕರ ಹುನಗುಂದ, ಶಿವಲಿಂಗಪ್ಪ ತಲ್ಲೂರ, ಬುಳ್ಳಪ್ಪ ಬಣಕಾರ, ರುದ್ರೇಶ ಹೊಸಮನಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.ಆರೋಪ ಮಾಡುವವರ ವಿರುದ್ಧವೂ ತನಿಖೆಯಾಗಲಿ..ಅನಾಮಿಕ ದೂರುದಾರನನ್ನು ಬಳಸಿಕೊಂಡು ಸಂತೋಷ ಶೆಟ್ಟಿ, ಗಿರೀಶ ಮಟ್ಟೆಣ್ಣವರ ಇತರರಿಗೆ ಆಗುವ ಲಾಭಗಳೇನು? ಸುಳ್ಳು ಆರೋಪ ಮಾಡಲು ಯಾರು ಪ್ರಚೋದನೆ ಮಾಡುತ್ತಿದ್ದಾರೆ? ಧರ್ಮಸ್ಥಳ ಕ್ಷೇತ್ರದ ಹೆಸರಿಗೆ ಕಳಂಕ ತರುವ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳಾವವು? ಈ ಎಲ್ಲ ಕಾರ್ಯಗಳಿಗೆ ಇವರಿಗಿರುವ ಆದಾಯದ ಮೂಲಗಳೇನು? ಈ ಎಲ್ಲ ಸಂಗತಿಗಳ ಬಗ್ಗೆಯೂ ತನಿಖೆ ಆಗಬೇಕಿದೆ.

ಇದಕ್ಕಾಗಿ ಅವರ ಮೊಬೈಲ್, ಬ್ಯಾಂಕ್ ಖಾತೆ, ಮನೆ ಹಾಗೂ ನಡೆಸುತ್ತಿರುವ ಕಚೇರಿಗಳನ್ನು ತನಿಖೆಗೊಳಪಡಿಸಬೇಕು. ತನಿಖೆ ನಿಗದಿತ ಸಮಯದೊಳಗೆ ಮುಗಿಸಿ ಜನರಲ್ಲಿರುವ ಗೊಂದಲಕ್ಕೆ ತೆರೆ ಎಳೆಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅವಹೇಳನಗಳು ಮುಂದುವರಿದಿದ್ದು, ಇದನ್ನು ತಕ್ಷಣ ನಿಲ್ಲಿಸುವ ಅಂಥವರ ವಿರುದ್ಧ ಕಾನುನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಯಿತು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ