ಗದಗ ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಬಸವರಾಜ ಬೊಮ್ಮಾಯಿ ಮನವಿ

KannadaprabhaNewsNetwork |  
Published : Aug 13, 2025, 12:30 AM IST
ನವದೆಹಲಿಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗದಗ- ಯಲವಿಗಿ ರೈಲ್ವೆ ಯೋಜನೆ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಸುಮಾರು 58 ಕಿಮೀ ಉದ್ದದ ಈ ಯೋಜನೆಗೆ 2017- 18ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಹಾವೇರಿ: ಗದಗ- ಯಲವಿಗಿ ರೈಲು ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿರುವ ಅವರು, ಗದಗ- ಯಲವಿಗಿ ರೈಲ್ವೆ ಯೋಜನೆ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಸುಮಾರು 58 ಕಿಮೀ ಉದ್ದದ ಈ ಯೋಜನೆಗೆ 2017- 18ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಯೋಜನೆ ಗದಗ- ಹಾವೇರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕ ಕಲ್ಪಿಸುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗುವುದರಿಂದ ಕರ್ನಾಟಕದ ಆರ್ಥಿಕ ಚಟುವಟಿಕೆಗಳನ್ನು ಮೇಲ್ದರ್ಜೆಗೇರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹಣಕಾಸು ಒದಗಿಸುತ್ತಿದ್ದು, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಲಿದೆ. ರಾಜ್ಯ ಸರ್ಕಾರ ಈಗಾಗಲೇ ಯೋಜನೆಯ ಶೇ. 50ರಷ್ಟು ಯೋಜನಾ ವೆಚ್ಚವನ್ನು ಹಾಗೂ ಉಚಿತ ಭೂಮಿ ಕೊಡುವುದಾಗಿ ತಿಳಿಸಲಾಗಿದೆ. ಪರಿಷ್ಕೃತ ಎಫ್‌ಎಸ್‌ಎಲ್ ಅಂದಾಜು ₹1.45 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದ್ದು, ಸರ್ವೆ ಕಾರ್ಯ ಮುಕ್ತಾಯವಾಗಿದೆ. ಆಗಸ್ಟ್ ಅಂತ್ಯದೊಳಗೆ ಪರಿಷ್ಕೃತ ಡಿಪಿಆರ್ ಸಿದ್ಧವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರದೊಂದಿಗೆ ತಕ್ಷಣವೇ ಸಮನ್ವಯ ಸಾಧಿಸಿ ಡಿಪಿಆರ್ ಪಡೆಯುವಂತೆ ನೈರುತ್ಯ ರೈಲ್ವೆ ವಲಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.ಯೋಜನೆಯ ಮೊದಲ ಹಂತದ ಯೋಜನಾ ವೆಚ್ಚ ಸುಮಾರು ₹650 ಕೋಟಿಯನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಂಡು, ಅದೇ ಸಮಯದಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನೂ ಕೈಗೊಂಡು ಪ್ರಸ್ತುತ 2025- 26ನೇ ಆರ್ಥಿಕ ವರ್ಷದಲ್ಲಿ ಯೋಜನೆ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ
21ರಿಂದ ರಾಜ್ಯಾದ್ಯಂತ ಪಲ್ಸ್‌ ಪೋಲಿಯೋ: ಗುಂಡೂರಾವ್‌