ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ
ಜಿಲ್ಲೆಯಲ್ಲಿನ ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಿ, ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಬುಡಕಟ್ಟು ಪ್ರದೇಶದ ಜನರಿಗೆ ತ್ವರಿತಗತಿಯಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಇದರಿಂದ ಸಮಾಜ ಪರಿವರ್ತನೆಯ ಜತೆಗೆ ದೇಶದ ಅಭಿವೃದ್ಧಿ ಸಹ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ, ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ತಾಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಮಂಗಳವಾರ ಆಯೋಜಿಸಿದ್ದ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ಆದಿ ಕರ್ಮಯೋಗಿ ಅಭಿಯಾನದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಮಾತನಾಡಿ, ಆದಿ ಕರ್ಮಯೋಗಿ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ದೇಶದ ಬುಡಕಟ್ಟು ಸಮಾಜಕ್ಕೆ ಸಂಬಂಧಿಸಿದ ಹೊಸ ಚಿಂತನೆಯಾಗಿದೆ. ವಿವಿಧ ಯೋಜನೆಗಳನ್ನು ತಲುಪಿಸುವುದು ಮತ್ತು ಜನರ ಕೌಶಲ್ಯಗಳನ್ನು ಉತ್ತೇಜಿಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಬುಡಕಟ್ಟು ನಾಗರಿಕರಿಗೆ ಅಗತ್ಯ ಸೇವೆಗಳನ್ನು ನೇರವಾಗಿ ಮತ್ತು ಪರಿಣಾಮಕಾರಿಯಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಉದ್ದೇಶವಾಗಿದ್ದು, ಮೂಲಭೂತ ಸೌಲಭ್ಯ ಹಾಗೂ ಸರ್ಕಾರಿ ಯೋಜನೆಗಳನ್ನು ಹಳ್ಳಿಗಳಿಗೆ ಕೊಂಡೊಯ್ಯುವಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿರುವ ಬಳ್ಳಾರಿ ತಾಲೂಕಿನ 10 ಗ್ರಾಮಗಳು, ಕಂಪ್ಲಿ ತಾಲೂಕಿನ 21 ಗ್ರಾಮಗಳು, ಕುರುಗೋಡು ತಾಲೂಕಿನ 3 ಗ್ರಾಮಗಳು, ಸಂಡೂರು ತಾಲೂಕಿನ 20 ಗ್ರಾಮಗಳು, ಸಿರುಗುಪ್ಪ ತಾಲೂಕಿನ 5 ಗ್ರಾಮಗಳ ಸೇರಿ ಒಟ್ಟು 59 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಈ ಗ್ರಾಮಗಳಲ್ಲಿ ಈಗಾಗಲೇ ಜನಭಾಗೀಧಾರಿ ಕಾರ್ಯಕ್ರಮ ಯೋಜನೆಯ ಬಗ್ಗೆ ಪ್ರಚಾರ ಮಾಡಲಾಗಿದೆ ಎಂದರು.
ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಉಪ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್., ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇಲಾಖೆಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.