ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಹಾವೇರಿ ವಿವಿ ಘಟಕದ ನೇತೃತ್ವದಲ್ಲಿ ಮಂಗಳವಾರ ಕೆರಿಮತ್ತಿಹಳ್ಳಿಯ ವಿಶ್ವವಿದ್ಯಾಲಯ ಕ್ಯಾಂಪಸ್ ಬಳಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಹಾವೇರಿ ವಿವಿ ಘಟಕದ ಅಧ್ಯಕ್ಷೆ ಪೂಜಾ ಬಾರ್ಕಿ ಮಾತನಾಡಿ, ವಿವಿಧ ಗ್ರಾಮೀಣ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರ ಹಾಗೂ ವಿಶ್ವವಿದ್ಯಾಲಯಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಬಸ್ ಅನಾನುಕೂಲ ವಿಪರೀತವಾಗಿದೆ. ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಶಂಭುಲಿಂಗ ಸವದತ್ತಿ ಮಾತನಾಡಿ, ವಿವಿ ಕ್ಯಾಂಪಸ್‌ನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಬಸ್ ಸಮಸ್ಯೆ ಬಗೆಹರಿದಿಲ್ಲ. ವಿದ್ಯಾರ್ಥಿಗಳು ಕುರಿಗಳ ಹಿಂಡಿನಂತೆ ತುಂಬಿಕೊಂಡು ಪ್ರಯಾಣಿಸುವಂತಾಗಿದೆ. ಜಿಲ್ಲಾ ಕೇಂದ್ರದಿಂದ 8-10 ಕಿ.ಮೀ ದೂರದಲ್ಲಿರುವ ವಿವಿಗೆ ಮುಂಜಾನೆ ಮತ್ತು ಮಧ್ಯಾಹ್ನ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷ ಪರಶುರಾಮ ಎಸ್, ಮುಖಂಡರಾದ ಹಸನಸಾಬ್ ಎ, ವೆಂಕಟೇಶ್ ಹೆಬ್ಬಾಳ, ಮಮತಾ ಎಮ್, ಕವನ ಬಿ., ನಿವೇದಿತಾ, ಸುನೀತಾ ಆರ್., ಅನಿತಾ ಎಚ್., ಅಂಜಲಿ ಸಿ., ಸುಮಾ ಮ್ಯಾಗಳಮನಿ, ಅಕ್ಷತ ಕೆ., ಗಂಗಮ್ಮ ಡಿ., ಗೌರಮ್ಮ ಜಿ., ಪಾರ್ವತಿ ಬಾಗಿಲದ, ಪವಿತ್ರ ಎಚ್., ಸಿಂಧು ಬಿ., ಅಭಿಷೇಕ ನಾಯ್ಕ್, ಜೀವನ ಮಲ್ಲೂರು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.