ಮೂರು ವರ್ಷಗಳಾದರೂ ನಡೆಯದ ಬಳ್ಳಾರಿ ಉತ್ಸವ!

KannadaprabhaNewsNetwork |  
Published : Sep 23, 2026, 02:15 AM IST
ರಗುಎ ರುಹ  | Kannada Prabha

ಸಾರಾಂಶ

2023ರಲ್ಲಿ ಮೊದಲ ಬಾರಿಗೆ ನಡೆದ ಬಳ್ಳಾರಿ ಉತ್ಸವದ ನಂತರ ಮತ್ತೊಮ್ಮೆ ಅದೇ ರೀತಿಯ ಉತ್ಸವಕ್ಕೆ ನಗರ ಸಾಕ್ಷಿಯಾಗಿಲ್ಲ.

ಮಂಜುನಾಥ ಕೆ.ಎಂ. ಬಳ್ಳಾರಿ

ಹಂಪಿ ಉತ್ಸವದ ಮಾದರಿಯಲ್ಲಿ ಬಳ್ಳಾರಿಯಲ್ಲೂ ಅದ್ಧೂರಿ ಉತ್ಸವ ನಡೆಸಲಾಗುವುದು... ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಗೆ ಉತ್ತೇಜನ ನೀಡಲಾಗುವುದು... ಸ್ಥಳೀಯ ಕಲಾವಿದರಿಗೆ ಹೆಚ್ಚಿನ ವೇದಿಕೆ ಕಲ್ಪಿಸಲಾಗುವುದು...

ಹೀಗೆ ಜನಪ್ರತಿನಿಧಿಗಳು ನೀಡಿದ್ದ ಭರವಸೆಯ ಮಾತುಗಳು ಕೇಳಿ ಬಳ್ಳಾರಿ ಜಿಲ್ಲೆಯ ಕಲಾವಿದರ ಕಣ್ಣಲ್ಲಿ ಹೊಸ ಕನಸುಗಳು ಮೂಡಿದ್ದವು. ಆದರೆ, ಆ ಕನಸುಗಳಿಗೆ ಈಗ ಮೂರು ವರ್ಷಗಳಾದರೂ ಜೀವ ಬಂದಿಲ್ಲ!

2023ರಲ್ಲಿ ಮೊದಲ ಬಾರಿಗೆ ನಡೆದ ಬಳ್ಳಾರಿ ಉತ್ಸವದ ನಂತರ ಮತ್ತೊಮ್ಮೆ ಅದೇ ರೀತಿಯ ಉತ್ಸವಕ್ಕೆ ನಗರ ಸಾಕ್ಷಿಯಾಗಿಲ್ಲ. ಉತ್ಸವದ ಬಗ್ಗೆ ಆಗಾಗ ಚರ್ಚೆಗಳು ಮುನ್ನೆಲೆಗೆ ಬರುತ್ತಿದ್ದರೂ, ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾತ್ರ ಕಾಣಿಸುತ್ತಿಲ್ಲ. ಹೀಗಾಗಿ ಬಳ್ಳಾರಿ ಉತ್ಸವ ಮತ್ತೆ ನಡೆಯಲಿದೆ. ಕಲಾವಿದರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ ಎಂಬ ಭರವಸೆಯೂ ಮಾಸಿ ಹೋದಂತಾಗಿದೆ.

ಬರೀ ಭರವಸೆ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯ ನಂತರ ಹಂಪಿ ಉತ್ಸವದಲ್ಲಿ ಜಿಲ್ಲೆಯ ಕಲಾವಿದರಿಗೆ ಹಿಂದಿನಷ್ಟು ಆದ್ಯತೆ ದೊರೆಯುವುದಿಲ್ಲ ಎಂಬ ಆತಂಕ ಕಲಾವಿದರಲ್ಲಿ ಮೂಡಿತ್ತು. ಹಂಪಿ ಈಗ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವುದರಿಂದ ಬಳ್ಳಾರಿ ಜಿಲ್ಲೆಯ ಕಲಾವಿದರಿಗೆ ಪ್ರತ್ಯೇಕ ಸಾಂಸ್ಕೃತಿಕ ವೇದಿಕೆಯ ಅಗತ್ಯವಿದೆ ಎಂಬ ಅಭಿಪ್ರಾಯವೂ ಬಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹಂಪಿ ಉತ್ಸವದ ಮಾದರಿಯಲ್ಲಿಯೇ ಬಳ್ಳಾರಿಯಲ್ಲಿ ಪ್ರತ್ಯೇಕ ಉತ್ಸವ ಆಯೋಜಿಸುವ ಭರವಸೆಗಳು ಕೇಳಿಬಂದಿದ್ದವು. ಜನಪ್ರತಿನಿಧಿಗಳ ಈ ಮಾತುಗಳು ಜಿಲ್ಲೆಯ ಕಲಾವಿದರಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದವು. ಆದರೆ, ಆ ನಿರೀಕ್ಷೆ ವರ್ಷ ಕಳೆದಂತೆ ನಿರಾಸೆಯಾಗಿ ಪರಿವರ್ತನೆಯಾಗಿದೆ.

ಮತ್ತೆ ಕಾಣದ ಸಂಭ್ರಮ:ಬಳ್ಳಾರಿ ಉತ್ಸವವನ್ನು ಮೊದಲ ಬಾರಿಗೆ 2023ರಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ನಗರದ ಪ್ರಮುಖ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆದಿದ್ದವು. ಜಿಲ್ಲೆಯ ವಿವಿಧ ಭಾಗಗಳ ಕಲಾವಿದರಿಗೆ ವೇದಿಕೆ ಕಲ್ಪಿಸುವ ಪ್ರಯತ್ನವೂ ನಡೆದಿತ್ತು. ಅಂದಿನ ಉತ್ಸವ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿತ್ತು. ಪ್ರತಿವರ್ಷ ಬಳ್ಳಾರಿ ಉತ್ಸವ ನಡೆಯಲಿದೆ. ಇದು ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ಸಹಜವಾಗಿಯೇ ಮೂಡಿತ್ತು. ಆದರೆ, ಮೊದಲ ಉತ್ಸವದ ನಂತರ ನಿರಂತರತೆ ಕಾಣಿಸಲಿಲ್ಲ.

ಒಂದು ಉತ್ಸವ ಆಯೋಜಿಸುವುದಕ್ಕಿಂತ ಅದನ್ನು ಪ್ರತಿವರ್ಷವೂ ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗುವುದು ಮುಖ್ಯ. ಉತ್ಸವವು ಕೇವಲ ಒಂದೆರಡು ದಿನಗಳ ಮನರಂಜನಾ ಕಾರ್ಯಕ್ರಮವಾಗದೆ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆ ಪ್ರತಿಬಿಂಬಿಸುವ ವೇದಿಕೆಯಾಗಬೇಕು. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿರಂತರ ಕಾರ್ಯಕ್ರಮವಾಗಬೇಕು ಎಂಬ ಆಶಯವೂ ಇತ್ತು. ಆದರೆ ಮೂರು ವರ್ಷಗಳ ಅವಧಿಯಲ್ಲಿ ಆ ನಿಟ್ಟಿನಲ್ಲಿ ನಿರೀಕ್ಷಿತ ಬೆಳವಣಿಗೆ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಳ್ಳಾರಿ ಉತ್ಸವ ನಡೆದಿತ್ತು.

ಬಳ್ಳಾರಿ ಉತ್ಸವ ಪ್ರತಿವರ್ಷ ನಡೆದಿದ್ದರೆ ಅನೇಕ ಸ್ಥಳೀಯ ಕಲಾವಿದರು ಹಾಗೂ ಯುವ ಕಲಾವಿದರಿಗೆ ಸೂಕ್ತ ವೇದಿಕೆ ಸಿಕ್ಕು ಪ್ರೋತ್ಸಾಹ ದೊರೆಯುತ್ತಿತ್ತು. ಸರ್ಕಾರ ಪ್ರತಿವರ್ಷ ಉತ್ಸವ ನಡೆಸಲು ಪೂರಕ ನಿರ್ಧಾರ ಕೈಗೊಳ್ಳುವಂತಾಗಬೇಕು ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುದ್ದಟನೂರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ವಿವಿಗೆ ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ವಿಜೃಂಭಣೆಯಿಂದ ಕೃಷ್ಣಮೃಗ ಅಭಯಾರಣ್ಯ ಸುವರ್ಣ ಮಹೋತ್ಸವಕ್ಕೆ ನಿರ್ಧಾರ