ಲಕ್ಷ್ಮೇಶ್ವರ: ಕಳೆದ 2 ತಿಂಗಳಿಂದ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಕೂಲಿ ಮಾಡಿ ಬದುಕುವ ನಾವು ನೀರಿಗಾಗಿ ಕೂಲಿ ಬಿಟ್ಟು ನೀರಿನ ಕೊಡ ಹಿಡಿದು ಅಲೆದಾಡುವಂತಾಗಿದೆ. ನೀರು ಬಿಡುವ ವರೆಗೂ ಇಲ್ಲಿಂದ ಕದಲುವುದಿಲ್ಲವೆಂದು 17- 18ನೇ ವಾರ್ಡಿನ ನಿವಾಸಿಗಳು ಪುರಸಭೆ ಎದುರು ಪ್ರತಿಭಟನೆ ಬುಧವಾರ ನಡೆಸಿದರು.
ಈ ವೇಳೆ ಸೋಮವ್ವ ಶೆರಸೂರಿ ಮಾತನಾಡಿ, ಪುರಸಭೆಯ ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಕುಡಿಯುವ ನೀರು ಸರಿಯಾಗಿ ಬರುವುದಿಲ್ಲ. ಚರಂಡಿ ಸ್ವಚ್ಛತೆ ಇಲ್ಲ. ಗಟಾರಗಳು ತುಂಬಿ ಹರಿಯುತ್ತಿವೆ. ಶೆರಸೂರಿಯವರ ಓಣಿಯಲ್ಲಿರುವ ಶೌಚಾಲಯಕ್ಕೆ ಕಳೆದ ಎರಡು ತಿಂಗಳಿಂದ ನೀರು ಇಲ್ಲ. ಇದರಿಂದ ಶೌಚಾಲಯದ ಅಕ್ಕಪಕ್ಕದ ನಿವಾಸಿಗಳು ದುರ್ನಾತದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಬಡವರಾದ ನಾವು ಕೊಳಚೆ ನಿವಾಸಿಗಳಿಗಿಂತ ಕಡೆಯಾದ ಜೀವನ ಸಾಗಿಸುತ್ತಿದ್ದೇವೆ. ಕುಡಿಯಲು ನೀರು ಇಲ್ಲದೆ ಕೂಲಿ ಕೆಲಸಕ್ಕೂ ಹೋಗಲು ಆಗುತ್ತಿಲ್ಲ. ಅಡುಗೆ ಮಾಡಲು ನೀರಿಲ್ಲ. ಶೌಚಾಲಯಕ್ಕೆ ಹೋಗಲು ನೀರು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ. ಸೂರಣಗಿ ಶುದ್ಧ ನೀರಿನ ಘಟಕದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ನೀರು ಪೂರೈಸುವ ಪೈಪ್‌ಗಳು ಬಹಳ ಹಳೆಯದಾಗಿದ್ದು. ಅವು ಅಲ್ಲಲ್ಲಿ ಒಡೆಯುತ್ತಿವೆ. ಅವುಗಳ ದುರಸ್ತಿಗೆ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಇದರಿಂದ ನೀರು ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಹೊಸ ಪೈಪ್ ಲೈನ್ ಜೋಡಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದಲ್ಲಿ ಶೀಘ್ರದಲ್ಲಿ ಕಾಮಗಾರಿ ಮಾಡಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ನಾಳೆ(ಗುರುವಾರ) ನಿಮ್ಮ ವಾರ್ಡ್‌ಗಳಿಗೆ ಆಗಮಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದು ಮನೆಗೆ ತೆರಳಿದರು. ಈ ವೇಳೆ ಪುರಸಭೆಯ 18ನೇ ವಾರ್ಡಿನ ಸದಸ್ಯೆ ಕವಿತಾ ಶೆರಸೂರಿ, 17ನೇ ಸದಸ್ಯೆ ವಾಣಿ ಹತ್ತಿ, ರುದ್ರವ್ವ ನಡಕಟ್ಟಿನ, ಶಶಿಕಲಾ ಗಾಳಿ, ಪ್ರೇಮಾ ತಡಸದ, ರುದ್ರವ್ವ ಶಿಗ್ಲೆಪ್ಪನವರ, ರೇಣುಕ ಗದ್ದಿ, ಹಾಲಮ್ಮ ಶೆರಸೂರಿ, ದಾನಮ್ಮ ಶೆರಸೂರಿ, ದೇವಮ್ಮ ಹಟ್ಟಿ, ರೇಖಾ ಶಿಶುನಾಳ, ತಿಪ್ಪವ್ವ ನಡಕಟ್ಟಿನ, ಅನಸವ್ವ ಶೆರಸೂರಿ ಸೇರಿದಂತೆ ಅನೇಕರು ಇದ್ದರು.