ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಧರಣಿ

KannadaprabhaNewsNetwork |  
Published : Oct 10, 2025, 01:01 AM IST
ಮ | Kannada Prabha

ಸಾರಾಂಶ

ಬ್ಯಾಡಗಿ ಪಟ್ಟಣದಲ್ಲಿನ ಬಡ ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಪುರಸಭೆ ಎದುರು ಬುಧವಾರದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನವಾದ ಗುರುವಾರ ಯಾವುದೇ ಫಲಪ್ರದ ಕಾಣಲಿಲ್ಲ.

ಬ್ಯಾಡಗಿ: ಪಟ್ಟಣದಲ್ಲಿನ ಬಡ ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಪುರಸಭೆ ಎದುರು ಬುಧವಾರದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನವಾದ ಗುರುವಾರ ಯಾವುದೇ ಫಲಪ್ರದ ಕಾಣಲಿಲ್ಲ. ಸ್ಥಳಕ್ಕೆ ಮುಖ್ಯಾಧಿಕಾರಿ: ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಶೇ.90ರಷ್ಟು ಆಯ್ಕೆ ಪಟ್ಟಿ ಕಾರ್ಯ ಮುಗಿದಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ಹಂಚಿಕೆಯಾಗಿಲ್ಲ ಎಂದು ಸಮಜಾಯಿಷಿ ನೀಡಿದರೂ ಸಹ ಪ್ರತಿಭಟನಾಕಾರರಿಂದ ಸಕಾರಾತ್ಮಕ್ಕೆ ಪ್ರತಿಕ್ರಿಯೆ ಬರಲಿಲ್ಲ.

ಗುಡಿಸಲಿನಲ್ಲಿ ವಾಸುತ್ತಿದ್ದೇವೆ: ಕಳೆದ 20 ವರ್ಷದಿಂದ ಬೆಟ್ಟದ ಮಲ್ಲೇಶ್ವರ ನಗರದಲ್ಲಿ ಜಾಗವಿಲ್ಲದೇ ಸಣ್ಣ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದೇವೆ. ಗುಡಿಸಲಲ್ಲಿ ವಿದ್ಯುತ್ ಸಂಪರ್ಕ, ನೀರಿಲ್ಲ. ಮೇಣದ ಬತ್ತಿ ಹಚ್ಚಿಕೊಂಡು ಬದುಕಬೇಕು, ಮಳೆಗಾಲದಲ್ಲಿ ಮನೆಗೆ ನೀರು ನುಗ್ಗಿ ಜೀವನ ಸಾಗಿಸುವುದು ನರಕಕ್ಕೆ ಸಮವಾಗಿದೆ. ಮನೆಗೆ ಹಾವು, ಚೇಳು ನುಗ್ಗುತ್ತಿದ್ದು, ರಾತ್ರಿ ಮಲಗಿದರೇ ಬೆಳಗ್ಗೆ ಎಳುತ್ತೇವೆ ಎಂಬ ನಂಬಿಕೆ ಇಲ್ಲ. ಇದರಲ್ಲಿಯೆ ಪುಟ್ಟ ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಬದುಕುತ್ತಿದ್ದೇವೆ, ಒಂದು ಬಾರಿಯಾದರೂ ಬಂದು ನಮ್ಮ ಗುಡಿಸಲು ನೋಡಿ ಬಡತನ ಎಷ್ಟು ಕೆಟ್ಟದ್ದು ಎಂದು ನಿಮಗೆ ಅರ್ಥವಾಗುತ್ತದೆ ಎಂದು ಪ್ರತಿಭಟನಾ ನಿರತ ಮಹಿಳೆ ಜಮಾಲಬಿ ನದಾಫ ಕಣ್ಣೀರು ಹಾಕಿದರು.ನಮ್ಮ ಗೋಳು ಕೇಳೋರಿಲ್ಲ: ಮನೆ ಬಾಡಿಗೆ ಮೂರರಿಂದ ನಾಲ್ಕು ಸಾವಿರ ರುಪಾಯಿ ಇದೆ. ನಾವು ದಿನಕ್ಕೆ 200 ರಿಂದ 300 ರು. ದುಡಿಯುತ್ತೇವೆ. ಬಾಡಿಗೆ ಕಟ್ಟಿ ಉಳಿದ ಹಣದಲ್ಲಿ ಜೀವನ ಸಾಗಿಸಬೇಕಿದೆ, ಗುಡ್ಡದ ಖಾಲಿ ಜಾಗದಲ್ಲಿ ಗುಡಿಸಲು ಹಾಕಿಕೊಂಡರೇ ಅಲ್ಲಿಗೂ ಬಂದು ಗುಡಿಸಲು ತೆಗೆಸಿ ನಮ್ಮನ್ನು ಬೀದಿಗೆ ತರಲಾಗುತ್ತಿದೆ, ನಿನ್ನೆಯಿಂದ ಕೆಲಸ ಕಾರ‍್ಯ ಬಿಟ್ಟು ಇಲ್ಲಿಯೇ ಧರಣಿ ನಡೆಸಿದರೂ ಜನಪ್ರತಿನಿಧಿಗಳು ಮಾತ್ರ ಬಂದು ನಮ್ಮ ನೋವು ಕೇಳಿಲ್ಲ, ಅವರೆಲ್ಲರೂ ಹೊಟ್ಟೆ ತುಂಬಿದವರು, ಹಸಿದವರ ಕಷ್ಟ ಅವರಿಗೆ ಅರ್ಥವಾಗಲ್ಲ ಮನೆ ಹಂಚಿಕೆ ಮಾಡುವವರೆಗೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಪರ್ವೀನಬಾನು ಗದಗ ಆಕ್ರೋಶ ವ್ಯಕ್ತಪಡಿಸಿದರು.

ಬಡವರ ಸರ್ವೇ ಮಾಡಿಸಿ: ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ವಿನಾಯಕ ಕಂಬಳಿ ಮಾತನಾಡಿ, ರಾಜ್ಯದಲ್ಲಿ ಜಾತಿ ಗಣತಿ ನಡೆಸಲಾಗುತ್ತಿದೆ. ಇದನ್ನು ಬಿಟ್ಟು ಮೊದಲು ಸರ್ಕಾರ ಬಡವರ ಸರ್ವೆ ಮಾಡಿಸಿ ಅವರಿಗೆ ಸವಲತ್ತು ಕೊಡುವ ಕೆಲಸ ಮಾಡಲಿ. ಅಂದಾಗ ಅರ್ಹ ಬಡವರಿಗೆ ಇಂತಹ ಸಮಸ್ಯೆಗಳು ಬೇಗ ಪರಿಹಾರವಾಗಲಿವೆ, ಹೋರಾಟಕ್ಕೆ ಬಂದಿರುವವರು ಅತ್ಯಂತ ಕಡು ಬಡವರು ಇವರಲ್ಲಿ ಯಾರು ಹಣ ತುಂಬಿಲ್ಲ, ಅಂದ ಮಾತ್ರಕ್ಕೆ ಇವರಿಗೆ ನಿವೇಶನ ನೀಡದೇ ಹೋದಲ್ಲಿ ನಾವು ಪ್ರತಿಭಟನೆ ಹೋರಾಟ ಬೇರೆ ರೂಪಕ್ಕೆ ತಲುಪಲಿದೆ ಎಂದು ಎಚ್ಚರಿಸಿದರು.ಸುರೇಶ ಛಲವಾದಿ, ಪರೀದಾಬಾನು ನದೀಮುಲ್ಲಾ, ಪಾಂಡುರಂಗ ಸುತಾರ, ಮಹೇಶ ಗಿರಣಿ, ಬಾಷಾಸಾಬ, ಪ್ರದೀಪ ಜಾಧವ, ಗೀತಾ ಮಡಿವಾಳರ, ಎಸ್.ಎಚ್.ಅನ್ನಪೂರ್ಣ, ಮಂಜುಳಾ ಬಂಡಿವಡ್ಡರ, ಕರಬಸಮ್ಮ ಮಡಿವಾಳರ, ಗೌರಮ್ಮ ಹರಿಜನ, ಷಹನಾಜ್ ಮೇಡ್ಲೇರಿ, ಜರೀನಾ ಮುಲ್ಲಾ, ಐಶ್ವರ್ಯ ಮಡಿವಾಳರ, ಜಾರವ್ವ ಕರಿಯಣ್ಣನವರ, ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.ಪ್ರತಿಭಟನಾ ಸ್ಥಳಕ್ಕೆ ಆಶ್ರಯ ಸಮಿತಿ ಪದಾಧಿಕಾರಿಗಳಾಗಲಿ, ಪುರಸಭೆ ಸದಸ್ಯರಾಗಲಿ ಯಾರೊಬ್ಬರು ಬರಲಿಲ್ಲ. ಯಾವುದೇ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಧರಣಿ ಮುಂದುವರೆದಿದೆ. ಪ್ರತಿಭಟನಾಕಾರರು ವೇದಿಕೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಿ ಧರಣಿ ಮುಂದುವರೆಸಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ