ವಿದ್ಯಾರ್ಥಿ ವೇತನ ನೀಡುವಲ್ಲಿನ ತಾರತಮ್ಯ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jul 24, 2024, 12:18 AM IST
೨೩ಎಚ್‌ವಿಆರ್೭ | Kannada Prabha

ಸಾರಾಂಶ

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ (ಶೇ.೬೦ರಿಂದ ೭೫ರಷ್ಟು ಫಲಿತಾಂಶ ಪಡೆದ) ರದ್ದು ಮಾಡಿದ ಪ್ರೋತ್ಸಾಹ ಧನ ಮುಂದುವರೆಸಲು, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡುವಲ್ಲಿನ ತಾರತಮ್ಯ ನಿಲ್ಲಿಸಲು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹಾವೇರಿ: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ (ಶೇ.೬೦ರಿಂದ ೭೫ರಷ್ಟು ಫಲಿತಾಂಶ ಪಡೆದ) ರದ್ದು ಮಾಡಿದ ಪ್ರೋತ್ಸಾಹ ಧನ ಮುಂದುವರೆಸಲು, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡುವಲ್ಲಿನ ತಾರತಮ್ಯ ನಿಲ್ಲಿಸಲು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಎಸ್‌ಎಫ್‌ಐ ಸಂಘಟನೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಿಂದ ಆರಂಭಗೊಂಡ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿಯ ನಿರ್ಮಿಸಿ ವಿದ್ಯಾರ್ಥಿ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ವೇಳೆ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಒಂದು ದೇಶ ಒಂದು ರಾಜ್ಯ ಅಭಿವೃದ್ಧಿ ಹೊಂದಬೇಕು ಅಂದರೆ, ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಶಿಕ್ಷಣದಿಂದ ಶತಮಾನಗಳ ಕಾಲ ವಂಚಿತರಾಗಿದ್ದ ಸಮುದಾಯದ ಮಕ್ಕಳಿಗೆ ಸರ್ಕಾರಿ ಯೋಜನೆಗಳು ಆಸರೆ ಆಗಬೇಕಾಗಿತ್ತು, ಬದಲಾಗಿ ಪರಿಷ್ಕೃತ ಆದೇಶದ ಮೂಲಕ ಇತ್ತೀಚಿಗೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮಾಡಿದ ಆದೇಶದಿಂದ ಆ ಸಮುದಾಯದ ಮಕ್ಕಳನ್ನು ಮತ್ತಷ್ಟು ಕತ್ತಲ ಕೋಪಕ್ಕೆ ತಳ್ಳುತ್ತಿವೆ ತಾವುಗಳು ಸದಾ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ ಎಂದು ಹೇಳುತ್ತಿದ್ದ ಸರ್ಕಾರ ಸದ್ದಿಲ್ಲದೆ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಶುಲ್ಕ ಮರುಪಾವತಿ ಯೋಜನೆಗಳನ್ನು ಕಡಿತಗೊಳಿಸಿದ್ದು ಖಂಡನೀಯ ಎಂದರು. ಅಹಿಂದ ವರ್ಗದ ಸಮುದಾಯದ ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ನೀವುಗಳು ಅದೇ ಅಹಿಂದ ವರ್ಗದ ಸಮುದಾಯದ ಮಕ್ಕಳಿಗೆ ಅನ್ಯಾಯ ಮಾಡಲು ಹೊರಟ್ಟಿದ್ದು ಸರಿಯಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಈ ಹಿಂದಿನ ಆದೇಶದಲ್ಲಿ ಶೇ.೬೦ ರಿಂದ ೭೪.೯೯ ಫಲಿತಾಂಶ ದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಪ್ರಥಮ ಭಾರಿಗೆ ಉತ್ತೀರ್ಣರಾದರೆ ೭ ಸಾವಿರ ರು. ಪ್ರೋತ್ಸಾಹ ಧನವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ಕೊಡಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಪರಿಷ್ಕೃತ ಆದೇಶದಲ್ಲಿ ಶೇ.೬೦ ರಿಂದ ೭೪.೯೯ ಫಲಿತಾಂಶಕ್ಕೆ ಇದ್ದ ಪ್ರೋತ್ಸಾಹ ಧನ ಯೋಜನೆ ರದ್ದು ಮಾಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ದೂರಿದರು. ಎಸ್‌ಎಫ್‌ಐ ಜಿಲ್ಲಾ ಮುಖಂಡ ನೇಹಾಲ್‌ಖಾನ್ ಗಂಗಾವತಿ ಮಾತನಾಡಿ, ಯಾವಾಗಲೂ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ಹಿಂದೆ ಇದ್ದ ಆದೇಶದ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವರ್ಗದ ಎಲ್ಲಾ ವಿದ್ಯಾರ್ಥಿಗಳ ಪ್ರೋತ್ಸಾಹ ಧನ, ಶುಲ್ಕ ಮರುಪಾವತಿಗೆ ಹಾಕಿರುವ ಕತ್ತರಿ ನಿಲ್ಲಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಳೆ ಆದೇಶವನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಅರ್ಜುನ್ ರಜಪುತ, ದೇವರಾಜ್ ಅರಕಸಾಲಿ, ಮಹೇಶ್ ಮರೋಳ, ಸುಲೇಮಾನ್ ಮತ್ತಿಹಳ್ಳಿ, ದುರ್ಗಪ್ಪ ಯಮ್ಮಿಯವರ , ಲಕ್ಷಿ÷್ಮ ಕೋರವರ, ಶೃತಿ ಆರ್.ಎಂ, ಮುತ್ತು ಎಚ್, ವಿಜಯ ಶಿರಹಟ್ಟಿ, ಲಕ್ಷ್ಮಿ ಆರ್. ಕೆ., ಭಾವನ ಕೆ.ಎಚ್., ಲಾವಣ್ಯ ಆರ್.ಡಿ., ಭವ್ಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ