ಕರಾವಳಿಯಲ್ಲಿ ಮೀನುಗಾರಿಕೆ ಆಹಾರಕ್ಕೆ ತೆರಿಗೆ ಇಳಿಕೆ, ಪ್ರವಾಸೋದ್ಯಮಕ್ಕೆ ಹೊಸ ಅವಕಾಶ

KannadaprabhaNewsNetwork |  
Published : Jul 24, 2024, 12:18 AM ISTUpdated : Jul 24, 2024, 12:40 PM IST
Udupi Fishing Boat

ಸಾರಾಂಶ

ಮೀನು ಕೃಷಿಗೆ ಬೇಕಾಗುವ ಆಹಾರದ ಮೇಲಿನ ಆಮದು ಸುಂಕವನ್ನು ತುಸು ಇಳಿಕೆ ಮಾಡಿದೆ. ಅಲ್ಲದೆ ಪ್ರವಾಸೋದ್ಯಮಕ್ಕೆ ಹೊಸ ಅವಕಾಶವನ್ನು ತೆರೆದಿದೆ.

 ಮಂಗಳೂರು : ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದ ಈ ಬಾರಿಯ ಬಜೆಟ್‌ನಲ್ಲಿ ಕರಾವಳಿ ಕರ್ನಾಟಕಕ್ಕೆ ವಿಶೇಷ ಘೋಷಣೆ, ಹೊಸ ಯೋಜನೆಗಳು ಏನೂ ಇಲ್ಲ. ಆದರೆ ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಖುಷಿ ನೀಡುವ ವಿಚಾರವನ್ನು ಪ್ರಕಟಿಸಿದೆ. ಅಂದರೆ ಸಿಗಡಿ, ಮೀನು ಕೃಷಿಗೆ ಬೇಕಾಗುವ ಆಹಾರದ ಮೇಲಿನ ಆಮದು ಸುಂಕವನ್ನು ತುಸು ಇಳಿಕೆ ಮಾಡಿದೆ. ಅಲ್ಲದೆ ಪ್ರವಾಸೋದ್ಯಮಕ್ಕೆ ಹೊಸ ಅವಕಾಶವನ್ನು ತೆರೆದಿದೆ.

ಸಿಗಡಿಗಳಿಗೆ ಹಾಕುವ ಆಹಾರದ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ. 15 ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ ಸಿಗಡಿ ಹಾಗೂ ಮೀನು ಆಹಾರ ಉತ್ಪಾದಿಸುವ ಘಟಕಗಳಿಗೆ ಬೇಕಾಗುವ ವಿಟಮಿನ್‌ ಮಿಕ್ಸ್‌ಗಳು, ಕ್ರಿಲ್‌ ಮೀಲ್‌, ಫಿಶ್‌ ಲಿಪಿಡ್‌ ತೈಲ, ಕಚ್ಚಾ ಮೀನು ತೈಲ, ಆಲ್ಗಲ್‌ ಪ್ರೆತ್ರೖಮ್‌, ಆಲ್ಗಲ್‌ ತೈಲಗಳ ಮೇಲಿನ ಶೇ.30, ಶೇ.15, ಶೇ. 5ರಷ್ಟಿದ್ದ ಸುಂಕವನ್ನು ಈ ಬಾರಿ ಪೂರ್ತಿಯಾಗಿ ತೆಗೆದು ಹಾಕಲಾಗಿದೆ.

ಕರಾವಳಿಯಲ್ಲಿ ಕ್ರೂಸ್‌ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕ್ರೂಸ್‌ ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಸುವ ಉದ್ದಿಮೆಯಾಗಿದ್ದು ದೇಶೀಯ ಕ್ರೂಸ್‌ ಹಡಗು ಆರಂಭಿಸುವ ವಿದೇಶಿ ಕ್ರೂಸ್‌ ಹಡಗು ಕಂಪನಿಗಳಿಗೆ ಸರಳೀಕೃತ ತೆರಿಗೆ ಪದ್ಧತಿ ರೂಪಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಇದನ್ನು ಹೊರತುಪಡಿಸಿದರೆ ಕರಾವಳಿಗೆ ಪ್ರತ್ಯೇಕ ಯೋಜನೆಗಳನ್ನು ಬಜೆಟ್‌ನಲ್ಲಿ ಹೇಳಲಾಗಿಲ್ಲ.

ಜನತೆಯ ತೆರಿಗೆ ಹೊರೆ ಇಳಿಸಿದ ಬಜೆಟ್‌: ಸತೀಶ್‌ ಕುಂಪಲ

ರಾಜ್ಯ ಸರ್ಕಾರ ತೆರಿಗೆ ಹೆಚ್ಚಿಸುತ್ತಿದ್ದರೆ, ಕೇಂದ್ರ ಸರ್ಕಾರ ಜನತೆಯ ಹೊರೆಯನ್ನು ಇಳಿಸಿದ್ದು ಶ್ಲಾಘನೀಯ. ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ಸ್‌ ತೆರಿಗೆ ವಿನಾಯ್ತಿ, ಮೊಬೈಲ್ ಫೋನ್ ಹಾಗೂ ಅದರ ಬಿಡಿ ಭಾಗಗಳ ತೆರಿಗೆ ಇಳಿಕೆ. ಮಧ್ಯಮ ವರ್ಗದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ೩ ಲಕ್ಷ ರು. ವರೆಗಿನ ಆದಾಯಕ್ಕೆ ಯಾವ ತೆರಿಗೆ ಇಲ್ಲ ಹಾಗೂ ತೆರಿಗೆ ಪಾವತಿ ಮಿತಿ ೫೦ ಸಾವಿರ ರು.ನಿಂದ ೭೫ ಸಾವಿರ ರು.ಗೆ ಏರಿಕೆ ಮಾಡಿದೆ. ಚಿನ್ನ, ಬೆಳ್ಳಿ ಮೇಲೆ ಶೇ.೬ ಕಸ್ಟಮ್ಸ್‌ ತೆರಿಗೆ ಇಳಿಕೆ ಮಾಡಿದ್ದು, ಇದರಿಂದ ಜಿಲ್ಲೆಯ ಸಾವಿರಾರು ಸಣ್ಣ ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ವರದಾನವಾಗಲಿದೆ.

-ಸತೀಶ್‌ ಕುಂಪಲ, ಅಧ್ಯಕ್ಷರು, ದ.ಕ. ಬಿಜೆಪಿ

ತಾರತಮ್ಯ ಹೆಚ್ಚಾದ ಬಜೆಟ್‌: ಹರೀಶ್‌ ಕುಮಾರ್‌

ಕೇಂದ್ರ ಬಜೆಟ್‌ನಲ್ಲಿ ತಾರತಮ್ಯ ಹೆಚ್ಚಾಗಿದ್ದು, ಪ್ರಜಾಪ್ರಭುತ್ವ ವಿರೋಧಿ ಬಜೆಟ್ ಆಗಿದೆ. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ಪಕ್ಷಗಳ ಆಡಳಿತ ರಾಜ್ಯಗಳಿಗೆ ಮಾತ್ರ ನೆರವು ನೀಡುವ ಬಜೆಟ್ ಆಗಿದೆ. ಇಂಡಿಯಾ ಒಕ್ಕೂಟದ ಪ್ರಭಾವವಿರುವ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಈ ಬಜೆಟ್‌ ಪೂರಕವಾಗಿಲ್ಲ. ಈ ಹಿಂದಿನ ಯುಪಿಎ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಮಂಡಿಸಿರುವ ಎಲ್ಲ ಬಜೆಟ್ ಗಳು ರಾಜಕೀಯ ಉದ್ದೇಶ ಹೊಂದಿರದೆ ಆರ್ಥಿಕ ಅಭಿವೃದ್ಧಿ ಮತ್ತು ದೂರದೃಷ್ಟಿಯನ್ನು ಹೊಂದಿತ್ತು. ಎನ್‌ಡಿಎ ರಾಜಕೀಯ ಸಲುವಾಗಿ ಬಜೆಟ್ ಮಂಡಿಸಿದೆ. ಒಟ್ಟಾರೆ ರಾಜಕೀಯ ಸರ್ಕಸ್ಸಿನ ಬಜೆಟ್.

-ಹರೀಶ್‌ ಕುಮಾರ್‌, ಅಧ್ಯಕ್ಷರು, ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ

ಉತ್ತಮ ಬಜೆಟ್‌: ಅನಂತೇಶ್‌ ಪ್ರಭು

ಕೃಷಿ, ಉದ್ಯೋಗ ಹಾಗೂ ಕೌಶಲಕ್ಕೆ, ಅಭಿವೃದ್ಧಿ, ಉತ್ಪಾದನೆ, ಸೇವೆ, ಗ್ರಾಮೀಣಾಭಿವೃದ್ಧಿ, ಸುರಕ್ಷಾ, ಮೂಲ ಸೌಕರ್ಯ, ಸಂಶೋಧನೆ ಹಾಗೂ ಮುಂದಿನ ಪೀಳಿಗೆಗೆ ಸುಧಾರಣೆಯೇ ಮೊದಲಾದ ಅಂಶಗಳನ್ನು ಹೊಂದಿರುವ ಉತ್ತಮ ಬಜೆಟ್‌ ಇದಾಗಿದೆ. 2025ರ ಹಣಕಾಸು ವರ್ಷದಲ್ಲಿ ಆರ್ಥಿಕ ವಿತ್ತೀಯ ಕೊರತೆಯನ್ನು ಶೇ.5.1ರಿಂದ ಶೇ.4.9ಕ್ಕೆ ಇಳಿಸಿದೆ. ಗರೀಬ್‌, ಮಹಿಳಾ, ಯುವ ಮತ್ತು ಅನ್ನದಾತರಿಗೆ ವಿಶೇಷ ಒತ್ತು ನೀಡಲಾಗಿದೆ.

-ಅನಂತೇಶ್‌ ವಿ.ಪ್ರಭು, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಗಳೂರುಜನತೆಯ ಹಿತಕಾಯುವ ಬಜೆಟ್ರೈತರು, ಮಹಿಳೆಯರು, ಉದ್ದಿಮೆದಾರರ ಸಹಿತ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ಮಂಡನೆಯಾಗಿದೆ. ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭದ್ರ ತಳಪಾಯ ಹಾಕಿದೆ. ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರು., ಶಿಕ್ಷಣ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಗೆ 1.48 ಲಕ್ಷ ಕೋಟಿ ರು., ಮಹಿಳೆಯರ ಅಭಿವೃದ್ಧಿಗೆ 3 ಲಕ್ಷ ಕೋಟಿ ರು., ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ರು. ಮೀಸಲಿರಿಸುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುದ್ರಾ ಯೋಜನೆಯ ಸಾಲದ ಮೀತಿ ಏರಿಕೆ ಸ್ವಾಗತಾರ್ಹ.- ನಳಿನ್‌ ಕುಮಾರ್ ಕಟೀಲ್, ಮಾಜಿ ಸಂಸದ ದ.ಕ.ದೂರದೃಷ್ಟಿಯ ಬಜೆಟ್‌: ಶಾಸಕ ವೇದವ್ಯಾಸ್‌ ಕಾಮತ್‌

ಇದೊಂದು ದೂರದೃಷ್ಟಿಯುಳ್ಳ ಬಜೆಟ್ ಆಗಿದ್ದು ಮುಖ್ಯವಾಗಿ ಕೃಷಿ ಮತ್ತು ರೈತ, ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ, ಉತ್ಪಾದನೆ, ಸೇವಾ ಕ್ಷೇತ್ರ, ಕೌಶಲ್ಯಾಭಿವೃದ್ಧಿ, ಮಹಿಳೆ,ಯುವಕರು, ಶಕ್ತಿಮೂಲಗಳು, ಸಂಶೋಧನೆಯಂತಹ 9 ಪ್ರಮುಖ ಆದ್ಯತಾ ಕ್ಷೇತ್ರಗಳನ್ನು ಗುರುತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಶಕ್ತಿ ತುಂಬಿದಂತಾಗಿದೆ.ಮಧ್ಯಮ ವರ್ಗ, ಕೈಗಾರಿಕೆ ವಲಯಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು ರಾಷ್ಟ್ರದ ಅಭಿವೃದ್ಧಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ತೆರಿಗೆದಾರನಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದಂತೆ ಎಚ್ಚರ ವಹಿಸಿರುವುದು ಪ್ರಶಂಸನೀಯ. ಹಲವು ಆಯಾಮಗಳಲ್ಲಿ ಈ ಬಜೆಟ್ ಸರ್ವಸ್ಪರ್ಶಿ ಬಜೆಟ್ ಎನಿಸಿರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

-ವೇದವ್ಯಾಸ್‌ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ.

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ : ರಮಾನಾಥ ರೈಇದು ದೇಶದ ಬಜೆಟ್ ಎಂದು ಅನಿಸುತ್ತಿಲ್ಲ. ಮೋದಿ‌ ಸರ್ಕಾರ ತನ್ನ ಕುರ್ಚಿಗಟ್ಟಿ ಮಾಡಿಕೊಳ್ಳಲು ಬಿಹಾರ, ಆಂಧ್ರಪ್ರದೇಶಕ್ಕೆ‌ ಬಜೆಟ್‌ನಲ್ಲಿ‌ ಸಿಂಹಪಾಲು ಕೊಟ್ಟಿದ್ದು ಬಿಜೆಪಿಯೇತರ ರಾಜ್ಯಗಳನ್ನು ಕಡೆಗಣಿಸಿದೆ. ಎನ್‌ಡಿಎ ಸರ್ಕಾರಕ್ಕೆ ೧೭+೨ ಸಂಸದರನ್ನು ನೀಡಿರುವ ಕರ್ನಾಟಕಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಖಾಲಿ ಚೊಂಬು ಕೊಟ್ಟು‌ ಅನ್ಯಾಯ ಮಾಡಿದೆ. ಕರ್ನಾಟಕಕ್ಕೆ ಈ ಬಜೆಟ್‌ನಲ್ಲಿ‌ ಸಿಕ್ಕಿರುವುದು ಶೂನ್ಯ. ಈ ರೀತಿ ಕರ್ನಾಟಕವನ್ನು ಯಾರೂ ಕಡೆಗಣಿಸಿರಲಿಲ್ಲ.ನೆನೆಗುದಿಗೆ ಬಿದ್ದಿರುವ ರಾಜ್ಯದ ಹಲವು ನೀರಾವರಿ ಯೋಜನೆ ಮತ್ತು ರೈಲ್ವೆ ಯೋಜನೆಗಳ ಪೈಕಿ ಯಾವುದೇ ಯೋಜನೆಗಳಿಗೂ ನಯಾಪೈಸೆ ಅನುದಾನ ಕೊಟ್ಟಿಲ್ಲ. ಮಂಗಳೂರನ್ನು ಪ್ರತ್ಯೇಕ ರೈಲ್ವೆವಿಭಾಗ ಮಾಡುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೆಗೆ ಸೇರಿಸಬೇಕೆಂಬ ಬೇಡಿಕೆಯನ್ನೂ ಈಡೇರಿಸಿಲ್ಲ. ನಿಸ್ಸಂಶಯವಾಗಿ ಈ ಬಜೆಟ್ ಕರ್ನಾಟಕಕ್ಕೆ ಮಹಾ ದ್ರೋಹ ಎಸಗಿದೆ ಎಂದು ಇತಿಹಾಸದಲ್ಲಿ‌ ದಾಖಲಾಗಲಿದೆ.- ಬಿ.ರಮಾನಾಥ ರೈ, ಮಾಜಿ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ