ಕೊಪ್ಪಳ: ಜನಪದ ಕಲೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಜೀವಾಳವಾಗಿದ್ದು, ಮಕ್ಕಳಲ್ಲಿ ಸಂಸ್ಕೃತಿ ಅರಿವು ಬೆಳೆಸುವ ಕಾರ್ಯ ಶಾಲೆಗಳು ನಿರಂತರವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಅಮರೇಶ ಪೂಜಾರ ಹೇಳಿದರು.
ನಗರದ ಶ್ರೀಶೈಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಗ್ರಿಮಾ ಜನಪದ ಲೋಕದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಕೇವಲ ಪಠ್ಯದ ಜ್ಞಾನದಿಂದ ಜ್ಞಾನ ವೃದ್ಧಿಯಾಗುವುದಿಲ್ಲ. ಅವರಿಗೆ ಪಠ್ಯೇತರ ಚಟುವಟಿಕೆಗಳ ಮೂಲಕವೂ ಅಪಾರ ಜ್ಞಾನ ತುಂಬಬೇಕು.ಅದರಲ್ಲೂ ಶ್ರೀಮಂತ ಸಂಸ್ಕೃತಿಯಾಗಿರುವ ನಮ್ಮ ಜಾನಪದ ಕಲೆ ಮಕ್ಕಳಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಅಂತಹ ಕೆಲಸ ಶಾಲೆಗಳು ನಿರಂತರವಾಗಿ ಮಾಡುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು. ಶ್ರೀಶೈಲನಗರದ ಸರ್ಕಾರಿ ಶಾಲೆಯ ಶಿಕ್ಷಕರು ಜಾನಪದ ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಎಚ್.ಮಾತನಾಡಿ, ಗ್ರಾಮೀಣ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಶಿಕ್ಷಣ ಒಂದಕ್ಕೊಂದು ಪೂರಕವಾಗಿದ್ದು, ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಬಾಲನಾಗಮ್ಮ ಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಜನಪದ ಸಂಸ್ಕೃತಿ ಉಳಿಸುವ ಉದ್ದೇಶದಿಂದ ಅಗ್ರಿಮಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಪದ ನೃತ್ಯ, ಡೊಳ್ಳುಕುಣಿತ, ಕಳಸ ನೃತ್ಯ, ಕೋಲಾಟ, ಹುಲಿವೇಷ ಸೇರಿದಂತೆ ವಿವಿಧ ಕಲಾ ಪ್ರದರ್ಶನ ನೀಡಿದರು. ಪೋಷಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಅನ್ವರ್ ಪಾಷಾ ಗೊಂಡಬಾಳ, ಮೆಹಬೂಬ್ ಹುಸೇನ್, ಮಲ್ಲು ಪೂಜಾರ್, ಶಿವಪ್ಪ ಜೋಗಿ, ಬೀರಪ್ಪ ಅಂಡಗಿ, ಹಜರತ್ ಅಲಿ ಮುಜಾವರ್, ಗಾಳೆಪ್ಪ ಕಡೆಮನಿ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.