ಕನ್ನಡಪ್ರಭ ವಾರ್ತೆ ಮಂಗಳೂರುಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆಯ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮಂಗಳೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಹಭಾಗಿತ್ವದಲ್ಲಿ ಕದ್ರಿ ಮಲ್ಲಿಕಟ್ಟೆ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಯಿತು.ವಿಶ್ವ ಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಗಣಪತಿ ವಿಸರ್ಜನೆ ವೇಳೆ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯ. ಇದು ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದೆ. ಘಟನೆ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡದ ಶಂಕೆಯಿದೆ. ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.ಮುಂದೆ ಈದ್ ಮಿಲಾದ್ ಹಬ್ಬ ಬರಲಿದೆ. ಅಂದು ಮೆರವಣಿಗೆ ನಡೆಯಲಿದ್ದು, ಆ ಮೆರವಣಿಗೆಗೆ ಸರ್ಕಾರ ಅವಕಾಶ ಕೊಡಬಾರದು, ಅವಕಾಶ ಕೊಟ್ಟರೆ ಮತ್ತೆ ಗಲಭೆ ಮಾಡುವ ಸಾಧ್ಯತೆಯಿದೆ ಎಂದರು.
ವಿಹಿಂಪ- ಬಜರಂಗದಳ ಮುಖಂಡರಾದ ಭುಜಂಗ ಕುಲಾಲ್, ಶಿವಾನಂದ ಮೆಂಡನ್, ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಸತೀಶ್ ಪ್ರಭು, ಕಾರ್ಪೊರೇಟರ್ ಕಿರಣ್ ಕೋಡಿಕಲ್, ಸುಧಾಕರ ರಾವ್ ಪೇಜಾವರ
ಮತ್ತಿತರರು ಇದ್ದರು.