ಕನ್ನಡಪ್ರಭ ವಾರ್ತೆ ವಿಜಯಪುರ
ಮಕ್ಕಳ ಅಭಿವೃದ್ಧಿಗೆ ಪಾಲಕರ ಉತ್ತೇಜನ ಅವಶ್ಯಕ. ವಿದ್ಯಾರ್ಥಿಗಳು ಪಾಲಕರನ್ನು ಸಂತೋಷವಾಗಿಡಲು ಪ್ರಯತ್ನಿಸಲಿ. ಓದು ಬಿಟ್ಟು ಅಡ್ಡದಾರಿ ತುಳಿಯಬೇಡಿ. ಯಶಸ್ಸಿನ ಹಿಂದೆ ಪರಿಶ್ರಮವಿರುತ್ತದೆ. ಸೋಲಿನ ಹಿಂದೆ ಲೋಪಗಳಿರುತ್ತವೆ ಎನ್ನುವ ಸೂಕ್ಷ್ಮತೆ ಅರಿಯಿರಿ ಎಂದು ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದು ನ್ಯಾಯಾಧೀಶರಾಗಿ ನೇಮಕವಾಗಿರುವ ಝಹೀರ್ ಅತನೂರ ಹೇಳಿದರು.ನಗರದ ಸಿಕ್ಯಾಬ್ ಪ.ಪೂ ಕಾಲೇಜಿನಲ್ಲಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಕೀಲರಾಗಿರುವ ನನ್ನ ತಂದೆ ಕೂಡ ನ್ಯಾಯಾಧೀಶರಾಗುವ ಕನಸು ಕಂಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಆದರೆ ಅವರ ಆಸೆಯಂತೆ ನಾಲ್ಕನೇ ಪ್ರಯತ್ನದಲ್ಲಿ ಸಿವಿಲ್ ಜಡ್ಜ್ ಆಯ್ಕೆ ಸಂದರ್ಶನದಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಯಶಸ್ಸಿನಲ್ಲಿ ಪಾಲಕರ ಸಂತಸವಿದೆ. ನಾನು ಕಲಿತ ಈ ಸಂಸ್ಥೆ ಅನೇಕ ಬಡಮಕ್ಕಳು ಹಾಗೂ ಹಿಂದುಳಿದ ವರ್ಗದವರಿಗೆ ವರದಾನವಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಸಾವಿರಾರು ಜನ ಡಾಕ್ಟರ್, ಎಂಜಿನಿಯರ್ ಆಗಿ, ಇನ್ನು ಕೆಲವರು ಕೆಎಎಸ್, ಐಎಎಸ್, ಐಆರ್‌ಎಸ್‌ನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷ ಎಸ್.ಎ.ಪುಣೇಕರ ಮಾತನಾಡಿ, ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಗೊಂಡಿರುವ ವಿದ್ಯಾರ್ಥಿ ಇದೇ ಸಂಸ್ಥೆಯಲ್ಲಿ ಓದಿರುವುದು ಹೆಮ್ಮೆಯ ಸಂಗತಿ. ಇದರಿಂದ ಸಂಸ್ಥೆಯ ಮತ್ತು ಜಿಲ್ಲೆಯ ಕೀರ್ತಿ ಪತಾಕೆ ಎತ್ತರಕ್ಕೇರಿದೆ. ಇವರ ಸಾಧನೆ ಮಾದರಿಯಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿ ಸಿಕ್ಯಾಬ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ ಮಾತನಾಡಿ, ಕಥೆ ಕೇಳುವ, ಕಥೆ ಹೇಳುವ, ಕಥೆಯಾಗುವ ವಿಶಿಷ್ಟ ಬದುಕು ನಮ್ಮದಾಗಿದೆ. ಸಾಧನೆಯ ಪೂರ್ಣರೂಪ ಸಾರ್ಥಕತ್ವ. ಬಾಲ್ಯ, ತಾರುಣ್ಯಗಳು ಭವಿಷ್ಯ ಕಟ್ಟಿಕೊಳ್ಳಲು ಪ್ರಮುಖ ಹಂತಗಳಾಗಿವೆ ಎಂದು ಹೇಳಿದರು.
ಸಹಕಾರಿ ಸಂಘಗಳು ಮತ್ತು ನೋಂದಣಿ ಇಲಾಖೆಯ ನಿವೃತ್ತ ಜಂಟಿ ರಿಜಿಸ್ಟಾರ್ ಎಸ್.ಎಸ್.ಬೀಳಗಿಪೀರ ಮಾತನಾಡಿ, ನಮಗೆ ಅವಕಾಶಗಳು ವಿಫುಲವಾಗಿವೆ, ಸೂಕ್ತವಾದುದನ್ನು ಆಯ್ದುಕೊಳ್ಳಿರಿ. ನಿತ್ಯ ಸುದ್ದಿಪತ್ರಿಕೆಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಿ, ಶಿಕ್ಷಕರ ಮಾತುಗಳನ್ನು ಪಾಲಿಸಿ ಎಂದು ಕಿವಿಮಾತು ಹೇಳಿದರು.ಸಂಸ್ಥೆಯ ನಿರ್ದೇಶಕ ಸಲಾಹುದ್ದೀನ್ ಪುಣೇಕರ ಮಾತನಾಡಿ, ಝಹೀರ್ ಅತನೂರ ಅವರ ಸಾಧನೆ ಅನನ್ಯವಾಗಿದೆ. ವಿದ್ಯಾರ್ಥಿ ಸಮುದಾಯಕ್ಕೆ ಅವರು ಪರೋಕ್ಷ ಪ್ರೇರಕರಾಗಿದ್ದಾರೆ. ನಶೆ ಪದಾರ್ಥಗಳ ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಉತ್ತಮವಾದುದನ್ನು ಯೋಚಿಸುತ್ತ, ಸಾತ್ವಿಕ ಆಹಾರ ಸೇವಿಸುತ್ತ ನಕಾರಾತ್ಮಕ ಶಕ್ತಿಯನ್ನು ಓಡಿಸಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು.
ಸಮಾರಂಭದಲ್ಲಿ ಸಿಕ್ಯಾಬ್ ಪ.ಪೂ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಚೇರ್ಮನ್ ನಜೀಬ್ ಬಕ್ಷಿ, ಹಿರಿಯ ನ್ಯಾಯವಾದಿ ಜಿ.ಎ.ಅತನೂರ, ಸಿಕ್ಯಾಬ್ ಪ.ಪೂ ಕಾಲೇಜುಗಳ ಡೀನ್ ಎನ್.ಎಸ್.ಭೂಸನೂರ ಉಪಸ್ಥಿತರಿದ್ದರು.ಉಪನ್ಯಾಸಕಿ ಎಸ್.ಎಂ.ಲಾಹೋರಿ ಸ್ವಾಗತಿಸಿದರು. ಸಿಕ್ಯಾಬ್ ಮಹಿಳಾ ಪ.ಪೂ ಕಾಲೇಜಿನ ಪ್ರಾಚಾರ್ಯ ಎಂ.ಎ.ಗುರಡಿ ಪರಿಚಯಿಸಿದರು. ಉಪನ್ಯಾಸಕಿ ಎಸ್.ಎ.ಮಿರ್ಜಾ ವಂದಿಸಿದರು. ಎಲ್.ಎಸ್.ಮುಜಾವರ, ಎ.ಎನ್.ರಿಸಾಲದಾರ, ಎ.ಎಂ.ಬಾಗವಾನ ನೆರವು ನೀಡಿದರು.-----------