ಕನ್ನಡಪ್ರಭ ವಾರ್ತೆ ಹಾಸನ
ವಿಶ್ವಕರ್ಮರನ್ನು ಕಳ್ಳ ಆಚಾರಿಗಳೆಂದು ಅಗೌರವವಾಗಿ, ಅನಾವಶ್ಯಕವಾಗಿ ಹೇಳುವ ಮೂಲಕ ವಿಶ್ವಕರ್ಮ ಸಮಾಜದ ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಲಕ್ಷ್ಮೀನಿವಾಸ ಧಾರವಾಹಿಗೆ ಬಹಿಷ್ಕಾರ ಹಾಕುವಂತೆ ಆಗ್ರಹಿಸಿ ಜಿಲ್ಲಾ ವಿಶ್ವಕರ್ಮ ಚಿನ್ನಬೆಳ್ಳಿ ಕೆಲಸಗಾರರ ಸಂಘದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ವಿಶ್ವಕರ್ಮ ಚಿನ್ನಬೆಳ್ಳಿ ಕೆಲಸಗಾರರ ಸಂಘದ ರಾಘವಾಚಾರ್ ಮಾಧ್ಯಮದೊಂದಿಗೆ ಮಾತನಾಡಿ, ಅಕ್ಕಸಾಲಿಗರ ಜಾತಿ ನಿಂದನೆ ಮಾಡಿ, ವಿಶ್ವಕರ್ಮ ಸಂಸ್ಕೃತಿ, ಪರಂಪರೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅಪಪ್ರಚಾರ ಮಾಡಿದಂತಹ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀನಿವಾಸ ಧಾರವಾಹಿಯ ಪಾತ್ರದಾರಿ ಹಾಗೂ ನಿರ್ದೇಶಕರ ಮೇಲೆ ಜಾತಿ ನಿಂದನೆ ಕೇಸ್ ಹಾಕಬೇಕು ಎಂದರು. ಏಪ್ರಿಲ್ ೧೫ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದಂತಹ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಚಿನ್ನ ಬೆಳ್ಳಿಯ ಆಭರಣಗಳ ವೃತ್ತಿಯಲ್ಲಿ ಅವಲಂಬಿತರಾಗಿರುವ ವಿಶ್ವಕರ್ಮರನ್ನು ಕಳ್ಳ- ಆಚಾರಿಗಳೆಂದು ಅಗೌರವವಾಗಿ, ಅನಾವಶ್ಯಕವಾಗಿ ಹೇಳುವ ಮೂಲಕ ವಿಶ್ವಕರ್ಮ ಸಮಾಜದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಧಾರವಾಹಿಯವರು ಏಕೆ ವಿಶ್ವಕರ್ಮ ಜನಾಂಗದ ಬಗ್ಗೆನೇ ಕಳ್ಳ ಆಚಾರಿಗಳೆಂದು ಹೀಯಾಳಿಸಿದ್ದಾರೆ? ಅದಕ್ಕೆ ಕಾರಣವೇನು? ಇವರಲ್ಲಿ ಏನಾದರೂ ಸಾಕ್ಷಿ ಇದೆಯೇ? ಸಂಭಾಷಣೆ ಬರೆದುಕೊಟ್ಟವರು ಯಾರು? ಅವರ ವಿರುದ್ಧ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಶ್ವದ ಸೃಷ್ಟಿಕರ್ತ ವಿಶ್ವಕರ್ಮರನ್ನು ಅವಮಾನಿಸಿರುವುದು ನಿಜಕ್ಕೂ ಖಂಡನೀಯ. ಇದನ್ನು ನಾವೀಗಲೇ ಪ್ರಶ್ನಿಸದಿದ್ದರೆ ನಮ್ಮ ಎಲ್ಲಾ ವಿಶ್ವದ ಸೃಷ್ಟಿಕರ್ತರನ್ನು ಅವಮಾನಿಸಿದಂತಾಗುತ್ತದೆ. ಇಂತಹವರನ್ನು ಘೇರಾವ್ ಹಾಕಬೇಕು. ಸರ್ಕಾರದ ಗಮನಕ್ಕೆ ತಂದು ಅಪಪ್ರಚಾರ ಮಾಡುವ ಇಂಥ ಧಾರಾವಾಹಿಗಳನ್ನು ಬಹಿಷ್ಕಾರ ಹಾಕಬೇಕು. ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿಯಾದರೂ ಈ ರೀತಿಯ ಅಪಪ್ರಚಾರಗಳು ಉಂಟಾದಲ್ಲಿ ಸರ್ಕಾರವೇ ಅವರುಗಳ ಮೇಲೆ ಯಾವುದೇ ದೂರು ಸ್ವೀಕರಿಸದೇ ಸ್ವಯಿಚ್ಚೆ ಯಿಂದ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಜಿಲ್ಲಾ ವಿಶ್ವಕರ್ಮ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಆರ್. ನಾಗೇಶ್, ನಾರಾಯಣ್, ರಾಜು ವೆಂಕಟೇಶ್, ರಾಘವಾಚಾರ್ ಸಂತೋಷ್, ಮಂಜುನಾಥ್, ಹೊಳೆನರಸೀಪುರದ, ಅರಕಲಗೂಡು ಮುಖಂಡರು ಸೇರಿದಂತೆ ಇತರರು ಇದ್ದರು.