ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತೋರುತ್ತಿರುವುದನ್ನು ಖಂಡಿಸಿ ತಾಲೂಕಿನ ಮಣ್ಣೂರ ಗ್ರಾಮದ ರೈತರು ಅರೆಬೆತ್ತಲಾಗಿ, ನೇಣಿಗೆ ಕೊರಳೊಡ್ಡುವ ರೀತಿ ಅಣಕು ಪ್ರದರ್ಶಿಸಿ ನಗರದ ತುಂಗಾ ಮೇಲ್ದಂಡೆ ಯೋಜನೆ ಉಪವಿಭಾಗದ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಡಿಸಿ ಆಫೀಸ್ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಯೋಜನೆ ಉಪವಿಭಾಗದ ಕಚೇರಿ ಆಗಮಿಸಿದ ರೈತರು ಪರಿಹಾರ ಹಣ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ನಡೆ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತರು ಮಾತನಾಡಿ, ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕಾಗಿ ಮಣ್ಣೂರ ಗ್ರಾಮದ ಸುಮಾರು 35 ರೈತರು ಕಳೆದ 12 ವರ್ಷಗಳ ಹಿಂದೆಯೇ ಫಲವತ್ತಾದ ಭೂಮಿಯನ್ನು ನೀಡಿದ್ದಾರೆ. ಈಗಾಗಲೇ ಕಾಲುವೆ ನಿರ್ಮಾಣಗೊಂಡು ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಯದೇ ಎಲ್ಲೆಂದರಲ್ಲಿ ಒಡೆದು ಹಾಳಾಗಿ ಹೋಗಿವೆ ಎಂದು ದೂರಿದರು. ರೈತರಿಗೆ ಅನುಕೂಲವಾಗಿ ಎಂಬ ಉದ್ದೇಶದಿಂದ ಫಲವತ್ತಾದ ಭೂಮಿಯನ್ನು ಗ್ರಾಮದ ಕೆಲವು ರೈತರು ನೀಡಿದ್ದು, ಇದುವರೆಗೂ ಸರ್ಕಾರದಿಂದ ನಯಾಪೈಸೆ ಪರಿಹಾರ ಹಣ ಬಂದಿಲ್ಲ. ಹೀಗಾಗಿ ಇತ್ತ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಸರ್ಕಾರದಿಂದ ಸೂಕ್ತ ಪರಿಹಾರವೂ ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದು, ಜೀವನ ನಡೆಸಲು ಸಾಧ್ಯವಾಗದೇ ನೇಣಿಗೆ ಶರಣಾಗುವ ಸ್ಥಿತಿಗೆ ಬಂದಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.ಇದೇ ಯೋಜನೆಗಾಗಿ ನಮ್ಮ ಗ್ರಾಮದ ಸುತ್ತಮುತ್ತಲಿನ ಕೇಸರಳ್ಳಿ, ಶಿರಮಾಪುರ, ಹೊಸರಿತ್ತಿ, ಯಲಗಚ್ಚ ಗ್ರಾಮಗಳ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಆದರೆ, ಕಳೆದ 12 ವರ್ಷಗಳ ಹಿಂದೆಯೇ ಭೂಸ್ವಾಧೀನ ಪಡಿಸಿಕೊಂಡಿದ್ದರೂ ನಮ್ಮ ಗ್ರಾಮದ ರೈತರಿಗೆ ಪರಿಹಾರ ನೀಡಿಲ್ಲ. ಹಲವು ವರ್ಷಗಳಿಂದ ಪರಿಹಾರದ ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡಿದರೂ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡದೇ ಹರಕೆ ಉತ್ತರ ನೀಡಿ ರೈತರನ್ನು ಕಚೇರಿಯಿಂದ ಸಾಗಿ ಹಾಕುವ ಕೆಲಸ ಮಾಡುತ್ತಾ ಬಂದಿದ್ದಾರೆ. ಅಧಿಕಾರಿಗಳು ಈಗಲಾದರು ಎಚ್ಚೆತ್ತು ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಹಣ ನೀಡಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ರೈತರು ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ರಾಮಕೃಷ್ಣ ಕೆ., ಅವರು ರೈತರ ಮನವೊಲಿಸಲು ಮುಂದಾದರು. ಆಗ ರೈತರು ಆಕ್ರೋಶಗೊಂಡು ಎಂಜಿನಿಯರ್ ಅವನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಪರಿಹಾರ ಹಣ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಎಂಜಿನಿಯರ್ ದೂರವಾಣಿ ಮೂಲಕ ಮೇಲಧಿಕಾರಿಗಳೊಂದಿಗೆ ಮಾತನಾಡಿ ವಿಷಯ ತಿಳಿಸಿದರು. ಅಲ್ಲದೇ ರೈತರೊಂದಿಗೂ ಮಾತನಾಡಿಸಿ, ಗ್ರಾಮದ ರೈತರ ದಾಖಲೆಗಳನ್ನು ತೋರಿಸಿ ಮನವೊಲಿಸಲು ಮುಂದಾದರೂ ಪಟ್ಟು ಬಿಡದ ರೈತರು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಮೂರು ತಿಂಗಳಲ್ಲಿ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಮಣ್ಣೂರ ಗ್ರಾಮದ ರೈತರಾದ ಈರಣ್ಣ ಹೊಸಮನಿ, ಶೇಖಪ್ಪ ಕಮತರ, ಮಲ್ಲಪ್ಪ ಕುರಬರ, ವೀರೇಶ ಮಡ್ಲೂರ, ಶಿವಪ್ಪ ಅರಳಿಹಳ್ಳಿ, ಹೂವಪ್ಪ ಹಳೇಮನಿ, ನಿಂಗಪ್ಪ ಹನ್ನೀರ, ಶಾಂತಪ್ಪ ತಳವಾರ, ಪುಟ್ಟಪ್ಪ ಕಮತರ, ಶಂಭುಲಿಂಗ ಹಿರೇಮಠ ಸೇರಿದಂತೆ ಗ್ರಾಮದ ರೈತರು ಪಾಲ್ಗೊಂಡಿದ್ದರು.