ಗದಗ: 15- 20 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸಿ, ಉಳಿದ ಬೋಧನಾ ಕಾರ್ಯಭಾರಕ್ಕಾಗಿ ಕೌನ್ಸೆಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಂಘಟನಾ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಆಗ್ರಹಿಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಡೆದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಮಾತನಾಡಿದರು.ಮಾನವೀಯತೆಯ ಆಧಾರದ ಮೇಲೆ ಆದ್ಯತೆ ನೀಡಿ ಸೇವಾ ಭದ್ರತೆ ಸೇವಾ ವಿಲೀನತೆಗೆ ಮುಂದಾಗದಿದ್ದರೆ ಉಗ್ರ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಹಿರಿಯ ಉಪನ್ಯಾಸಕಿ ದೊಡ್ಡಬಸಮ್ಮ ಮಾತನಾಡಿ, 20 ವರ್ಷಗಳ ಕಾಲ ಹೆಚ್ಚು ಸೇವೆ ಸಲ್ಲಿಸುತ್ತಾ ಬಂದಿರುವೆ. ನನ್ನ ಕೈಯಲ್ಲಿ ಶಿಕ್ಷಣ ಪಡೆದುಕೊಂಡು ಬಂದಿರುವವರು ಜಿಲ್ಲಾಧಿಕಾರಿ, ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಯಲ್ಲಿ ಹುದ್ದೆಗಳಲ್ಲಿ ಇದ್ದಾರೆ. ಆದರೆ ಯುಜಿಸಿ ನಾನ್ ಯುಜಿಸಿ ಎಂದು ಹೇಳಿ ಬೀದಿಗೆ ಹಾಕುತ್ತಿದ್ದಾರೆ. ಮಕ್ಕಳ ಭವಿಷ್ಯ ಕಟ್ಟುತ್ತಾ ಬಂದಿರುವ ನಮಗೆ ಮಕ್ಕಳ ಮತ್ತು ನಮ್ಮ ಭವಿಷ್ಯವೆ ಬೀದಿಗೆ ಬಂದಿದೆ. ನಮಗೆ ವಯಸ್ಸಾಗಿದೆ. ನಮಗೂ ಅವಕಾಶ ನೀಡಬೇಕು ಎಂದರು.ಬೀದರಿನ ಅನಿಲಕುಮಾರ ಸಿಂಧೆ ಮಾತನಾಡಿ, ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಮುಂದುರಿಸಬೇಕು. ಉಳಿದಂತಹ ಬೋಧನಾ ಕಾರ್ಯಭಾರಕ್ಕೆ ಕೌನ್ಸೆಲಿಂಗ್ ನಡೆಯಲಿ. 2009ರಲ್ಲಿ ಪೂರ್ಣಗೊಳಿಸಿರುವ ಎಂಪಿಲ್ ಹೊಂದಿದವರಿಗೂ ಅವಕಾಶ ನೀಡಿ ಮತ್ತು ಭದ್ರತೆಯನ್ನು ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ದಕ್ಷ ಅಧಿಕಾರಿಯಾಗಿದ್ದ ಮಹಾಂತೇಶ ಬೀಳಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಮತ್ತು ಸಂವಿಧಾನ ದಿನ ಆಚರಿಸಲಾಯಿತು. ಮನಮೋಹನ, ಸುರೇಶ, ಅನಿಲ ಹಾರೂಗೇರಿ, ಎನ್.ಬಿ. ಬಡಿಗೇರ, ದಾನೇಶ್ವರಿ, ಪಾರ್ವತಿ ತಾರಿಹಾಳ, ಸರಸ್ವತಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶಶಿಕಲಾ ಜೋಳದ, ಅಮೃತ್, ದೇಸಾಯಿಗೌಡರ, ಡಾ. ವಿ.ಡಿ. ಮುಳಗುಂದ, ಭಗತಸಿಂಗ್ ನವಲಕೂರ, ಡಾ. ಚಂದ್ರಕಾಂತ ಶಿರೋಳ ಸೇರಿದಂತೆ ಬೀದರ್, ಕಲಬುರಗಿ, ಉತ್ತರಕನ್ನಡ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅತಿಥಿ ಉಪನ್ಯಾಸಕರು ಇದ್ದರು.