ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಕಳೆದ ವಾರ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದ ಶೌಚಗೃಹದ ಬಳಿ ಮಹಿಳೆಯೊಬ್ಬರ ಹೆರಿಗೆಯಾಗಿ, ಶಿಶು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಸಿಸಿ ಕ್ಯಾಮೆರಾ ದೃಶ್ಯ ತೋರಿಸುವಂತೆ ಹೇಳಿದಾಗ ತಾಂತ್ರಿಕ ಸಿಬ್ಬಂದಿ ತಡವರಿಸಿದರು. ಇದರಿಂದ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಸಮನ್ಸ್ ಕೊಡುತ್ತೇನೆ. ಬೆಂಗಳೂರಿಗೆ ಬನ್ನಿ ಎಂದರು. ಆನಂತರ ಎಚ್ಚೆತ್ತ ಸಿಬ್ಬಂದಿ ಲ್ಯಾಪ್‌ಟಾಪ್‌ನಲ್ಲಿ ವಿಡಿಯೋಗಳನ್ನು ತೋರಿಸಿದರು.
50 ನಿಮಿಷಗಳ ವಿಡಿಯೋ ಫೂಟೇಜ್ ಅನ್ನು ಶೇಖರಗೌಡ ಗಮನಿಸಿದರು. ಮಕ್ಕಳ ಆಸ್ಪತ್ರೆ ಒಪಿಡಿ ಕೌಂಟರ್ ಹೆಚ್ಚಿಸಿ, ಇಲ್ಲವೇ ಬೆಳಗ್ಗೆ 7 ಅಥವಾ 8ರಿಂದಲೇ ಚೀಟಿ ಬರೆಸಲು ಅವಕಾಶ ಕೊಡಿ. ಚೀಟಿಯಲ್ಲಿ ‘ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ’ ಎಂದು ಬರೆಸಿ ಎಂದು ಕಳೆದ ಬಾರಿ ಸಭೆಯಲ್ಲಿ ಸೂಚಿಸಿದ್ದೆ. ಆದರೂ ಈ ವರೆಗೆ ಪಾಲನೆಯಾಗಿಲ್ಲ. ಈ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ಸಿಸಿ ಕ್ಯಾಮೆರಾ ಫೂಟೇಜ್ ಗಮನಿಸಿದ್ದು, ರೂಪಾ ಆಸ್ಪತ್ರೆಗೆ ಬಂದು 50 ನಿಮಿಷದಲ್ಲಿ ಎಲ್ಲ ಘಟನೆ ನಡೆದಿದೆ. 10.17ಕ್ಕೆ ಆಸ್ಪತ್ರೆಗೆ ಆಗಮಿಸಿದ್ದು, 11.07ಕ್ಕೆ ಹೆರಿಗೆಯಾಗಿದೆ. ಡಿ. 25ರಂದು ವೈದ್ಯರು ಹೆರಿಗೆ ದಿನಾಂಕ ಕೊಟ್ಟಿದ್ದರು. ನ. 18ರಂದು ಒಪಿಡಿಗೆ ಬಂದು ವೈದ್ಯರು ತಪಾಸಣೆ ನಡೆಸಿದ್ದು, ಈ ಬಗ್ಗೆ ನಮೂದಿಸಿದ್ದಾರೆ. ಶೌಚಕ್ಕೆ ಹೋಗುವಾಗ ರೂಪಾ ಅವರಿಗೆ ಕಾರಿಡಾರ್‌ನಲ್ಲೇ ಹೆರಿಗೆಯಾಗಿದೆ. ಈ ಕುರಿತು ಸಮಗ್ರ ವರದಿಯನ್ನು ಮಕ್ಕಳ ಆಯೋಗದ ಅಧ್ಯಕ್ಷರಿಗೆ ಸಲ್ಲಿಸುತ್ತೇನೆ. ಮುಂದಿನ ನಿರ್ಧಾರವನ್ನು ಆಯೋಗ ತೆಗೆದುಕೊಳ್ಳುತ್ತದೆ ಎಂದು ಶೇಖರಗೌಡ ರಾಮತ್ನಾಳ ಹೇಳಿದರು.
ಜಿಲ್ಲಾಸ್ಪತ್ರೆಯ ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಲ್.ಎಲ್. ರಾಠೋಡ, ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ, ಮಕ್ಕಳ ತಜ್ಞ ಡಾ. ಅಂಜನಕುಮಾರ, ಡಾ. ಸಂತೋಷ, ಶೂಶ್ರೂಷಣಾ ಅಧಿಕಾರಿ ಮಾಲತೇಶ, ಆಸ್ಪತ್ರೆ ಸಿಬ್ಬಂದಿ, ಇತರರಿದ್ದರು.