ಕೊಪ್ಪಳ: ನಮ್ಮ ದೇಶವೂ ವಿಶ್ವದ ಅತೀ ದೊಡ್ಡ ಸಂವಿಧಾನ ಹೊಂದಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ-2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗಿತೆಗಳು ಎಷ್ಟು ಪ್ರಾಮುಖ್ಯತೆ ಪಡೆದಿವೆಯೋ ಅವುಗಳಿಗೆ ಸರಿಸಮನಾಗಿರುವಂತಹ ಗ್ರಂಥ ಭಾರತದ ಸಂವಿಧಾನವಾಗಿದೆ. ಜಾಗತಿಕವಾಗಿ ಹೆಸರಾದ ಮತ್ತು ಅನೇಕ ದೇಶಗಳಿಗೆ ಮಾದರಿಯಾದ ಸಂವಿಧಾನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾಕಾಲ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಸಂವಿಧಾನ ಓದಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಸಂವಿಧಾನವು ನಮಗೆ ಸಾಮಾಜಿಕ ಸಮಾನತೆ, ನ್ಯಾಯ, ಕಾನೂನಾತ್ಮಕ ರಕ್ಷಣೆ ಒದಗಿಸುತ್ತದೆ. ಸಂವಿಧಾನವು ನಮಗೆ ಹಕ್ಕುಗಳ ಜತೆಗೆ ವಿಶೇಷವಾಗಿ ಕರ್ತವ್ಯ ನೀಡಿದೆ. ಹಾಗಾಗಿ ಅವುಗಳನ್ನು ನಾವೆಲ್ಲರು ಪಾಲಿಸಬೇಕು. ಪ್ರತಿಯೊಬ್ಬರು ಸಂವಿಧಾನ ಓದಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.ಮಂಜುನಾಥ ಹಿರೇಮಠ ವಿಶೇಷ ಉಪನ್ಯಾಸ ನೀಡಿ, ನಮ್ಮ ದೇಶ ಅಖಂಡ ಭಾರತವಾಗಿ, ಭವ್ಯ ಭಾರತವಾಗಿ, ಸಮಾನತೆಯ ಭಾರತವಾಗಿ ನಿಂತಿರಲು ನಮ್ಮ ಸಂವಿಧಾನ ಮೂಲವಾಗಿದ್ದು, ಇದರ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ್ ಕರಡನ್ನು ರಚನೆ ಮಾಡಿಕೊಂಡು ಒಂದು ಗುಣಮಟ್ಟ ಆಧಾರಿತ ಸಂವಿಧಾನ ದೇಶಕ್ಕೆ ನೀಡಿದರು. ಇಂದು ನಮ್ಮ ಭಾರತದ ಸಂವಿಧಾನವು ಜಗತ್ತಿನ ಅತೀ ದೊಡ್ಡ ಸಂವಿಧಾನ ಆಗಿದೆ ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಅಜ್ಜಪ್ಪ ಸೊಗಲದ ಸಂವಿಧಾನ ಪೀಠಿಕೆ ಬೋಧಿಸಿದರು.
ಸಂವಿಧಾನ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಜಗದೀಶ್, ಅಜ್ಮೀರ ಅಲಿ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಥಾ: ಕಾರ್ಯಕ್ರಮಕ್ಕೂ ಮುಂಚೆ ಕೊಪ್ಪಳ ನಗರದಲ್ಲಿರುವ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್, ಬಸವೇಶ್ವರ ಹಾಗೂ ಬಾಬು ಜಗಜೀವನರಾಂ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ ಹಾಗೂ ಎಸ್ಪಿಡಾ.ರಾಮ್ ಎಲ್. ಅರಸಿದ್ದಿ ಪುಷ್ಪ ನಮನ ಸಲ್ಲಿಸಿದ ನಂತರ ತಾಲೂಕು ಕ್ರೀಡಾಂಗಣಕ್ಕೆ ತೆರಳಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಅಜ್ಜಪ್ಪ ಸೊಗಲದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿನಿರ್ದೇಶಕ ಜಗದೀಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಕೊಪ್ಪಳ ತಹಸೀಲ್ದಾರ ವಿಠಲ ಚೌಗಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರೆ ಹಲವಾರು ಜನರು ಉಪಸ್ಥಿತರಿದ್ದರು.