ಹೆದ್ದಾರಿ ತಡೆದು ಮೆಕ್ಕೆಜೋಳ ಬೆಳೆಗಾರರ ಪ್ರತಿಭಟನೆ

KannadaprabhaNewsNetwork |  
Published : Nov 27, 2025, 02:15 AM IST
ಜಿಲ್ಲಾಧಿಕಾರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಎಂಎಸ್‌ಪಿ ಮಾರ್ಗಸೂಚಿ ಅನ್ವಯ ಮೆಕ್ಕೆಜೋಳವನ್ನು ಕನಿಷ್ಠ ₹2400 ಹಾಗೂ ರಾಜ್ಯ ಸರ್ಕಾರ ₹600 ಳೊಂದಿಗೆ 1 ಕ್ವಿಂಟಲ್‌ಗೆ ₹3000 ನಂತೆ ಖರೀದಿಸಬೇಕು ಎಂದು ರೈತರು ಆಗ್ರಹಿಸಿದರು.

ಮುಳಗುಂದ: ಜಿಲ್ಲಾದ್ಯಂತ ಗೋವಿನಜೋಳ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಆಗ್ರಹಿಸಿ ಸ್ಥಳೀಯ ರೈತ ಸಂಘದಿಂದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು.

ಗದಗ- ಲಕ್ಷೇಶ್ವರ ಸಂಪರ್ಕ ಕಲ್ಪಿಸುವ ಪಾಳಾ- ಬಾದಾಮಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೆಳೆದ ಪ್ರತಿ ಬೆಳೆಗೂ ಸರಿಯಾದ ಬೆಲೆ ಇಲ್ಲ. ರೈತರು ಪ್ರತಿಯೊಂದನ್ನು ಪಡೆಯಬೇಕಾದರೂ ಹೋರಾಟ ಅನಿವಾರ್ಯವಾಗಿದೆ. ಮಾರುಕಟ್ಟೆಯಲ್ಲಿ ಗೋವಿನಜೋಳವನ್ನು ಕ್ವಿಂಟಲ್‌ಗೆ ₹1500ರಿಂದ 1600ರಂತೆ ಖರೀದಿಸುತ್ತಿದ್ದಾರೆ. ಇದು ರೈತರಿಗೆ ತುಂಬಲಾರದ ನಷ್ಟವಾಗಿದೆ. ರಾಜ್ಯ ಸರ್ಕಾರ ಹೇಗೆ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟಿದೆ ಅದೇ ರೀತಿ, ಎನ್‌ಎಸ್‌ಪಿ ಮಾರ್ಗಸೂಚಿ ಅನ್ವಯ ಕನಿಷ್ಠ ₹2400 ಹಾಗೂ ರಾಜ್ಯ ಸರ್ಕಾರ ₹600 ಳೊಂದಿಗೆ 1 ಕ್ವಿಂಟಲ್‌ಗೆ ₹3000 ನಂತೆ ಖರೀದಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಮೇಲೆ, ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಹೀಗೆ ಬೊಟ್ಟು ಮಾಡಿ ತೋರಿಸುವುದು ಹೀಗೆ ರಾಜಕೀಯ ಮಾಡುವುದನ್ನು ಬಿಡಬೇಕು. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ತಮ್ಮ ಕುರ್ಚಿಗೆ ಹೊಡೆದಾಡುತ್ತಿದ್ದಾರೆ ವಿನಾ ರಾಜ್ಯದ ರೈತರ ಕಡೆ ಗಮನ ಹರಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ನೀಡಿ, ಅದನ್ನ ಭರಿಸಲು ರೈತರಿಂದ, ಸಾಮಾನ್ಯ ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ರೈತರನ್ನು ದೇಶದ ಬೆನ್ನೆಲುಬು ಎಂದು ಹೇಳಿಕೊಂಡು ರೈತರ ಬೆನ್ನನ್ನು ಮುರಿಯುವ ಕೆಲಸವನ್ನು ಮಾಡುತ್ತಿದ್ದಾರೆ. ರೈತರು ಬೆಳೆಯುವುದನ್ನು ಬಿಟ್ಟರೆ ನೀವೆಲ್ಲ ಮಣ್ಣು ತಿನ್ನಬೇಕಾಗುತ್ತೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10 ಲಕ್ಷ ಮೆ. ಟನ್‌ ಗೋವಿನಜೋಳ ಖರೀದಿಸುವಂತೆ ತಿಳಿಸಿದ್ದಾರೆ. ಆದರೆ ಈವರೆಗೂ ಆದೇಶ ಮಾಡಿಲ್ಲ. ಪ್ರತಿಯೊಬ್ಬ ರೈತರು ಬೆಳೆದ ಗೋವಿನಜೋಳವನ್ನು ಖರೀದಿಸಲು ಸರ್ಕಾರ ಕ್ರಮ ವಹಿಸಬೇಕು. ಈಗಾಗಲೇ ಗೋವಿನಜೋಳ ಕಟಾವು ಮಾಡಿ ತಿಂಗಳುಗಟ್ಟಲೇ ಆಯಿತು. ಗೋವಿನಜೋಳ ನುಸಿ ಹತ್ತುತ್ತಿವೆ. ಇದೇ ರೀತಿ ಕಾಲಹರಣ ಮಾಡದೇ ತ್ವರಿತವಾಗಿ 7 ದಿನಗಳೊಳಗಾಗಿ ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸದಿದ್ದರೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ .ಅವರು ಆಗಮಿಸಿ, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳಿಗೆ ತಿಳಿಸುತ್ತೇನೆ. ಪ್ರತಿಭಟನೆ ಹಿಂಪಡೆಯರಿ ಎಂದಾಗ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವ ವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಅವರು ಮನವಿ ಸ್ವೀಕರಿಸಿ, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗನೆ ಗೋವಿನಜೋಳ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಸೇರದಂತೆ ನೂರಾರು ರೈತರು ಇದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ