ಮಾಜಿ ಶಾಸಕ ಶಿವಶರಣಪ್ಪಗೌಡ ಪೊಲೀಸ್ ಪಾಟೀಲ್ ನಿಧನ

KannadaprabhaNewsNetwork |  
Published : Nov 27, 2025, 02:15 AM IST
೨೬ ವೈಎಲ್‌ಬಿ ೦೧ಶಿವಶರಣಪ್ಪಗೌಡ ಪಾಟೀಲ್-ಭಾವಚಿತ್ರ.೨೬ ವೈಎಲ್‌ಬಿ ೦೨ಶಿವಶರಣಪ್ಪಗೌಡ ಪಾಟೀಲ್‌ರು ತಮ್ಮ ಅಭಿಮಾನಿಗಳು ಹಮ್ಮಿಕೊಂಡ ೭೫ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದರು.೨೬ ವೈಎಲ್‌ಬಿ ೦೩ಯಲಬುರ್ಗಾದಲ್ಲಿ ಜೆಡಿಎಸ್ ಪಕ್ಷದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ರೈತರ ಬೃಹತ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಮಾಜಿ‌ ಶಾಸಕ ಶಿವಶರಣಪ್ಪಗೌಡ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಇವರ ಅವಧಿಯಲ್ಲಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಅಂಗನವಾಡಿ ಶಾಲಾ-ಕಾಲೇಜು ಕಟ್ಟಡ, ಸಮುದಾಯ ಭವನ, ಕೆರೆಗಳ ಪುನಶ್ಚೇತನ ಆಗಿವೆ

ಯಲಬುರ್ಗಾ: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಪ್ಪಗೌಡ ಅಡಿವೆಪ್ಪಗೌಡ ಪೊಲೀಸ್ ಪಾಟೀಲ್ (೭೮) ಬುಧವಾರ ತುಮಕೂರಿನ ಸಿದ್ದಗಂಗಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

ಮೃತರಿಗೆ ಪತ್ನಿ, ಜಿಪಂ ಮಾಜಿ‌ ಸದಸ್ಯ ಅರವಿಂದಗೌಡ ಪಾಟೀಲ್ ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.

ಮೃತರ ಪಾರ್ಥಿವ ಶರೀರವನ್ನು ಪಟ್ಟಣದ ಬಂಡಿ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಗುರುವಾರ ಬೆಳಗ್ಗೆ ೯ಗಂಟೆ ವರೆಗೆ ಇರಿಸಲಾಗುತ್ತದೆ. ಬಳಿಕ ಸ್ವಗ್ರಾಮ ಹುಣಸಿಹಾಳದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಂಜೆ ೪ಗಂಟೆಗೆ ಅವರ ತೋಟದಲ್ಲಿ ಹಿಂದೂ ಧರ್ಮದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗುವದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ರಾಜಕೀಯ ಹೆಜ್ಜೆ ಗುರುತು:

ಶಿವಶರಣಪ್ಪಗೌಡ ಪೊಲೀಸ್ ಪಾಟೀಲ್ಅ ವರು 1999 ರಿಂದ 2004 ರ ವರೆಗೆ ಯಲಬುರ್ಗಾ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಎರಡು ಬಾರಿ ವಿಧಾನಸಭೆಗೆ ಕಾಂಗ್ರೆಸ್‌ ಪಕ್ಷದಿಂದಲೇ ಸ್ಪರ್ಧಿಸಿ ಪರಾಜಿತರಾಗಿದ್ದರು.

ರಾಜಕೀಯ ಇತಿಹಾಸದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಅವರು, ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದರು. ಶಾಸಕರಾಗಿ ಆಯ್ಕೆಯಾಗುವ ಮುಂಚೆ ೧೯೮೭ರಲ್ಲಿ ಟಿಡಿಬಿ ಅಧ್ಯಕ್ಷರಾಗಿ, ೧೯೯೩ರಲ್ಲಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮುತ್ಸದ್ದಿ ರಾಜಕಾರಣಿ, ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ೧೯೪೭ರಲ್ಲಿ ಜನಿಸಿದರು. ಪಾಟೀಲರು ಆಂಗ್ಲಭಾಷೆ ಸೇರಿದಂತೆ ಇನ್ನಿತರ ಭಾಷೆಗಳ ಪ್ರಾವೀಣ್ಯತೆ ಹೊಂದಿದ್ದರು.

ಅವಿನಾಭಾವ ಸಂಬಂಧ: ಮಾಜಿ ಶಾಸಕ ಶಿವಶರಣಪ್ಪಗೌಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ದೇವರಾಜು ಅರಸು, ಎಸ್.ಎಂ. ಕೃಷ್ಣ, ಮಾಜಿ ಸಂಸದ ಎಚ್.ಜಿ. ರಾಮುಲು ಸೇರಿದಂತೆ ಇತರ ರಾಜಕಾರಣಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು.

ಜಾತಿ, ಪಕ್ಷಭೇದ ನೋಡದೇ ಹಲವರನ್ನು ರಾಜಕೀಯವಾಗಿ ಬೆಳೆಸಿದ ಕೀರ್ತಿ ಶಿವಶರಣಪ್ಪಗೌಡರಿಗೆ ಸಲ್ಲುತ್ತದೆ.

ಇವರ ಅವಧಿಯಲ್ಲಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಅಂಗನವಾಡಿ ಶಾಲಾ-ಕಾಲೇಜು ಕಟ್ಟಡ, ಸಮುದಾಯ ಭವನ, ಕೆರೆಗಳ ಪುನಶ್ಚೇತನ ಆಗಿವೆ.

ಕಳೆದ ಮೂರು ವರ್ಷದ ಹಿಂದೆ ಯಲಬುರ್ಗಾದ ತಾಲೂಕು ಕ್ರೀಡಾಂಗಣದಲ್ಲಿ ಅಭಿಮಾನಿಗಳು ೭೫ನೇ ವರ್ಷದ ಜನ್ಮದಿನ ಆಚರಣೆ ನಿಮಿತ್ತ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇಂತಹ ಜನಪರ ರಾಜಕಾರಣಿ ಕಳೆದುಕೊಂಡ ಕ್ಷೇತ್ರ ಬಡವಾಗಿದೆ. ಪಾಟೀಲ್‌ರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ವಿಷಯಗಳ ಮುಂದಿಟ್ಟು ಫೆ.2ನೇ ವಾರ ಬೃಹತ್‌ ಪ್ರತಿಭಟನೆ: ಎಂ. ಗುರುಮೂರ್ತಿ ಮಾಹಿತಿ
ಸುಂಡಘಟ್ಟದಲ್ಲಿ ಬಸ್ ತಂಗುದಾಣ ಉದ್ಘಾಟನೆ