ಹುಬ್ಬಳ್ಳಿ:
ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಮಹಾನಗರ ಪಾಲಿಕೆ ಕ್ರಮಕೈಗೊಳ್ಳಲು ಮುಂದಾಗಿದ್ದು, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕ ಬೀದಿನಾಯಿಗಳ ವಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಆಯುಕ್ತ ಡಾ. ರುದ್ರೇಶ ಘಾಳಿ ಸ್ಪಷ್ಟಪಡಿಸಿದರು.ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕ ಇಮ್ರಾನ್ ಯಲಿಗಾರ, ಬೀದಿ ನಾಯಿಗಳು, ಬಿಡಾಡಿ ದನಗಳ ಹಾವಳಿ ಬಗ್ಗೆ ಗಮನ ಸೆಳೆದಾಗ ಅವರು ಈ ವಿಷಯ ಸದನಕ್ಕೆ ತಿಳಿಸಿದರು.
ಬೀದಿನಾಯಿಗಳ ನಿಯಂತ್ರಣದ ಬಗ್ಗೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಗಳವಾರ ಸಭೆ ನಡೆಸಿದ್ದು, ಪಾಲಿಕೆಗೆ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹುಬ್ಬಳ್ಳಿ ಭಾಗದಲ್ಲಿ ₹ 3 ಕೋಟಿ ಹಾಗೂ ಧಾರವಾಡ ಭಾಗದಲ್ಲಿ ₹ 2 ಕೋಟಿ ನೀಡುವಂತೆ ಕೋರಲಾಗುವುದು. ಎರಡು ಕಡೆಗಳಲ್ಲಿ ಪ್ರತ್ಯೇಕ ನಾಯಿಗಳ ವಲಯ ನಿರ್ಮಿಸಲು ಯೋಜನೆ ರೂಪಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಏಜೆನ್ಸಿ ಗುರುತಿಸಿದ್ದು ಸಂತಾನಶಕ್ತಿ ಹರಣ ಸೇರಿದಂತೆ ಶ್ವಾನಗಳ ನಿಷ್ಕ್ರಿಯತೆ ಒಳಗೊಂಡ ಎಲ್ಲ ಚಿಕಿತ್ಸಾ ಕ್ರಮ ಪೂರೈಸಿದ ಬಳಿಕ ಅವುಗಳನ್ನು ನಿರ್ದಿಷ್ಟ ವಲಯಕ್ಕೆ ಬಿಡಲಾಗುತ್ತದೆ ಎಂದು ಆಯುಕ್ತರು ವಿವರಿಸಿದರು.₹ 19 ಕೋಟಿ ಏನಾಯ್ತು:
ಮಹಾನಗರದಲ್ಲಿ ಈ ಹಿಂದೆ ನೀರು ಪೂರೈಕೆ ನಿರ್ವಹಿಸುತ್ತಿದ್ದ ಜಲಮಂಡಳಿ ಬಿಟ್ಟು ಹೋಗುವಾಗ ₹ 19 ಕೋಟಿ ಉಳಿಸಿಕೊಂಡಿತ್ತು. ಅದನ್ನು ಪಾಲಿಕೆಗೆ ಭರಿಸುವುದಾಗಿ ಹೇಳಿತ್ತು. ಆ ದುಡ್ಡು ಏನಾಯ್ತು? ಎಂದು ಸದಸ್ಯ ತಿಪ್ಪಣ್ಣ ಮಜ್ಜಗಿ ಪ್ರಶ್ನಿಸಿದರು. ಆಗ ಆಯುಕ್ತರು ಈ ಬಗ್ಗೆ ಮಾಹಿತಿ ಇಲ್ಲ ಎಂದರು.ಜಲಮಂಡಳಿಯಿಂದ ಎಲ್ ಆ್ಯಂಡ್ ಟಿಗೆ ನೀರು ನಿರ್ವಹಣೆ ಮತ್ತು ಕಾರ್ಯಾಚರಣೆ ಹಸ್ತಾಂತರಿಸುವ ವೇಳೆ ಆಗಿರುವ ಒಪ್ಪಂದ ಹಾಗೂ ನಡಾವಳಿ ಪರಿಶೀಲಿಸಿ ₹ 19 ಕೋಟಿಯ ಮಾಹಿತಿ ಪಡೆದು ಮುಂದುವರಿಯುವಂತೆ ಸಭೆಯು ಆಯುಕ್ತರಿಗೆ ಸಲಹೆ ನೀಡಿತು.
ನೀರು ಪೂರೈಕೆಗೆ ಸಂಬಂಧಿಸಿದಂತೆ ನೀರಸಾಗರ ಮತ್ತು ಸವದತ್ತಿ ಜಾಕ್‌ವೆಲ್, ಮಷಿನ್ ಹಾಗೂ ಇತರ ಆಸ್ತಿಗಳು ಜಲಮಂಡಳಿ ಹೆಸರಿನಲ್ಲಿದ್ದು, ಪಾಲಿಕೆ ಹೆಸರಿಗೆ ವರ್ಗಾಯಿಸಲು ಅನುಮೋದನೆ ನೀಡುವಂತೆ ಆಯುಕ್ತರು ಮನವಿ ಮಾಡಿದರು.ಇ-ಸ್ವತ್ತು ಸರಳೀಕರಿಸಿ:
ಪಾಲಿಕೆ ವ್ಯಾಪ್ತಿಯ ಗ್ರಾಮಗಳಲ್ಲಿ ಇ-ಸ್ವತ್ತು ಪಡೆಯಲು ಕಷ್ಟವಾಗುತ್ತಿದ್ದು, ಇದರ ಸರಳೀಕರಣಕ್ಕೆ ಕ್ರಮವಹಿಸಬೇಕು ಎಂದು ರಾಮಪ್ಪ ಬಡಿಗೇರ ಆಗ್ರಹಿಸಿದರು. ಇ-ಆಸ್ತಿಗೆ ಸೇಲ್ ಡೀಡ್ ಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಅನಾದಿ ಕಾಲದಿಂದಲೂ ಪಿತ್ರಾರ್ಜಿತ ಆಸ್ತಿಯಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಅಲ್ಲಿನ ಪಿಡಿಒಗಳು ಜಾಗದ ಸರ್ವೇ ಮಾಡಿ ಪಂಚನಾಮೆ ಮಾಡಿ ಪಾಲಿಕೆಯ ವಲಯ ಆಯುಕ್ತರಿಗೆ ಕೊಟ್ಟರೆ ಇ-ಸ್ವತ್ತು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.ಸಿಸಿ ಕ್ಯಾಮೆರಾ ಅಳವಡಿಸಿ:
ಇತ್ತೀಚೆಗೆ ಬಾಂಬ್ ಸ್ಫೋಟ, ಹಣ ಲೂಟಿಯಂತಹ ಕೃತ್ಯಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಪೊಲೀಸರಿಗೆ ಸಹಾಯವಾಗುವ ರೀತಿ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ರಾಜಣ್ಣ ಕೊರವಿ ಒತ್ತಾಯಿಸಿದರು. ಹೊಸೂರು ಸರ್ಕಲ್‌ನಿಂದ ಏರ್‌ಪೋರ್ಟ್ ವರೆಗಿನ ಗೋಕುಲ್ ರಸ್ತೆಯ ಅಕ್ಕಪಕ್ಕದಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ಆ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪೊಲೀಸರು ಕ್ರಮಕೈಗೊಂಡು ಮಾಲ್‌ನ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುವಂತೆ ಸೂಚಿಸಬೇಕು. ಈ ಕುರಿತು ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಬೇಕೆಂದು ರಾಮಪ್ಪ ಬಡಿಗೇರ ಸಲಹೆ ನೀಡಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ಆಗ ಮೇಯರ್ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.ಗುತ್ತಿಗೆದಾರರ ಹಣ ನೀಡಿಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸ್ವಲ್ಪ ಹಣವನ್ನಾದರೂ ನೀಡಬೇಕು. ಹೀಗಾದಲ್ಲಿ ಮತ್ತೆ ಅವರು ಕಾಮಗಾರಿ ಮುಂದುವರಿಸುತ್ತಾರೆ. ಈ ನಿಟ್ಟಿನಲ್ಲಿ ಮೂರು ತಿಂಗಳಿಗೊಮ್ಮೆ ಶೇ.25ರಷ್ಟಾದರೂ ಹಣ ನೀಡಬೇಕು ಎಂದು ಒತ್ತಾಯಿಸಿದರು. ಆಗ ಮೇಯರ್, ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.