ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದೇ ಅಪಘಾತಕ್ಕೆ ನಾಲ್ಕು ಕಾನೂನುಬದ್ಧ ವೈದ್ಯಕೀಯ ಪರೀಕ್ಷಾ ಪ್ರಮಾಣ ಪತ್ರ (ಮೆಡಿಕೋ ಲೀಗಲ್‌ ಕೇಸ್‌-ಎಂಎಲ್‌ಸಿ) ನೀಡಿದ ವೈದ್ಯನ ಕೆಲಸಕ್ಕೆ ದಿಗ್ಭ್ರಮೆಪಟ್ಟ ಹೈಕೋರ್ಟ್‌, ವೈದ್ಯನ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿ ತನಿಖೆ ಮುಂದುವರಿಯಲಿ ಎಂದು ಕಟು ನಿರ್ದೇಶನ ನೀಡಿದೆ.

ಸುಳ್ಳು ಎಂಎಲ್‌ಸಿ ನೀಡಿದ ಆರೋಪದ ಮೇಲೆ ಸಕಲೇಶಪುರ ಗ್ರಾಮೀಣ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ರದ್ದು ಪಡಿಸುವಂತೆ ಕೋರಿ ಹಾಸನದ ‘ಜನಪ್ರಿಯ’ ಆಸ್ಪತ್ರೆ ವೈದ್ಯ ಡಾ.ಅಬ್ದುಲ್‌ ಬಶೀರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಒಂದೇ ಅಪಘಾತಕ್ಕೆ ಯಾರಾದರೂ ನಾಲ್ಕು ಎಂಎಲ್‌ಸಿ ನೀಡಬಹುದೇ? ಜನಪ್ರಿಯ ಆಸ್ಪತ್ರೆ ವೈದ್ಯ ಈ ಕೆಲಸಕ್ಕೆ ಜನಪ್ರಿಯರೇ? ಇಂಥ ವೈದ್ಯರಿಂದಲೇ ವಂಚನೆ ಪ್ರಕರಣಗಳು ನಡೆಯುತ್ತಿರುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕಾನೂನು ಕ್ರಮ ಎದುರಿಸಲಿ:

ವೈದ್ಯನ ಪರ ವಕೀಲರು ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ಪರಿ ಪರಿಯಾಗಿ ಕೋರಿದರೂ ಸುತಾರಾಂ ಒಪ್ಪದ ನ್ಯಾಯಮೂರ್ತಿಗಳು, ಕಾನೂನು ಕ್ರಮವನ್ನು ವೈದ್ಯ ಎದುರಿಸಲಿ. ತನಿಖೆ ಮುಂದುವರಿಯಲಿ. ಮುಂದಿನ ವಿಚಾರಣೆ ವೇಳೆ ಪೊಲೀಸರು (ಸರ್ಕಾರ) ಪ್ರಕರಣದ ತನಿಖಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಿ ಎಂದು ನಿರ್ದೇಶಿಸಿತು.

ಜೊತೆಗೆ, ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ಸಕಲೇಶಪುರ ಗ್ರಾಮೀಣಾ ಠಾಣಾ ಪೊಲೀಸರು ಮತ್ತು ಪ್ರಕರಣದಲ್ಲಿ ದೂರುದಾರರಾದ ಬಜಾಜ್‌ ವಿಮಾ ಕಂಪನಿಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

2025ರ ಡಿ.23ರಂದು ಬಜಾಜ್‌ ವಿಮಾ ಕಂಪನಿಯ ಪ್ರತಿನಿಧಿ ಪ್ರತೀಕ್‌ ಸಕಲೇಶಪುರದ ಗ್ರಾಮೀಣಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 2024ರ ಜ.27ರಂದು ಸಂಜೆ 6,10ಕ್ಕೆ ಕಾರ್ಮಿಕ ಅಬ್ದುಲ್‌ ರೆಹಮಾನ್‌ಗೆ ಕೆಎ46ಕ್ಯೂ1588 ನಂಬರಿನ ಬೈಕ್‌ ಡಿಕ್ಕಿ ಹೊಡೆದಿದೆ. ಇದರಿಂದ ಆತನ ಎಡತೊಡೆಯ ಮೂಳೆ ಮುರಿದಿದೆ. ಈ ಸಂಬಂಧ ಸಕಲೇಶಪುರ ಗ್ರಾಮೀಣಾ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಕಂಪನಿಯು 2025ರ ಜೂ.23ರಂದು ವಿಚಾರಣೆ ನಡೆಸಿತ್ತು. ಆಗ, ಅಬ್ದುಲ್‌ ರೆಹಮಾನ್‌ ರಸ್ತೆ ಅಪಘಾತವಾದ ದಿನದಂದೇ ಚಿತ್ರದುರ್ಗದ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಎಂಎಲ್‌ಸಿ ಪಡೆದುಕೊಂಡಿದ್ದಾನೆ. ಅದರಲ್ಲಿ ಆತ 15 ಅಡಿ ಎತ್ತರದಿಂದ ಸ್ವಯಂ ಬಿದ್ದಿದ್ದಾನೆ ಎಂಬ ಸಂಗತಿ ನಮೂದಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಆದರೆ, ಅಬ್ದುಲ್‌ ರೆಹಮಾನ್‌ ವಿಮಾ ಕ್ಲೇಮು ಪಡೆಯಲು ಹಾಸನದ ಜನಪ್ರಿಯ ಆಸ್ಪತ್ರೆಯ ಸಹಕಾರದಿಂದ ರಸ್ತೆ ಅಪಘಾತ ಪ್ರಕರಣವೆಂದು ಆಸ್ಪತ್ರೆಯ ಇಂಟಿಮೇಷನ್‌ ದಾಖಲಾತಿಯನ್ನು ಮರು ಸೃಷ್ಟಿಸಿದ್ದಾನೆ. ಆ ಮೂಲಕ ಬಜಾಜ್‌ ವಿಮಾ ಕಂಪನಿಗೆ ವಂಚಿಸಲು ಪ್ರಯತ್ನಿಸಿದ್ದಾನೆ. ಆದ ಕಾರಣ ಅಬ್ದುಲ್‌ ರೆಹಮಾನ್‌, ಜನಪ್ರಿಯ ಆಸ್ಪತ್ರೆಯ ಡಾ.ಅಬ್ದುಲ್ ಬಶೀರ್‌ ಮತ್ತು ಬೈಕಿನ ಮಾಲೀಕ (ಕೆಎ46ಕ್ಯೂ1588) ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿದ್ದರು. ಈ ದೂರು ಆಧರಿಸಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ಎರಡನೇ ಆರೋಪಿಯಾದ ಡಾ.ಅಬ್ದುಲ್‌ ಬಶೀರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಡಾ.ಅಬ್ದುಲ್‌ ಬಸೀರ್‌ ಪರ ವಕೀಲರು, ಸ್ವಾಮಿ... ಅರ್ಜಿದಾರರು ವೈದ್ಯರಾಗಿದ್ದಾರೆ. ವಿಮಾ ಕಂಪನಿ ದೂರು ದಾಖಲಿಸಿದೆ ಎಂದರು.

ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಅದು ಸರಿ. ಯಾರಾದರೂ ಒಂದು ಅಪಘಾತಕ್ಕೆ ನಾಲ್ಕು ಎಂಎಲ್‌ಸಿ ಕೊಡುತ್ತಾರೆಯೇ? ಅದನ್ನು ನೀವೇ ಕೊಟ್ಟಿದ್ದೇ? ಬಂದವರಿಗೆಲ್ಲ ಒಂದೊಂದು ಎಂಎಲ್‌ಸಿ ಕೊಟ್ಟು ಕಳುಹಿಸುತ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಅರ್ಜಿದಾರರ ಪರ ವಕೀಲರು, ಇಲ್ಲ ಸ್ವಾಮಿ. ಅಬ್ದುಲ್‌ ರೆಹಮಾನ್‌ ಚಿತ್ರದುರ್ಗದಲ್ಲಿ ಅಪಘಾತ ನಡೆದಿದೆ ಎಂದು ಹೇಳಿಬಂದಿದ್ದರು. ಗಾಯಗೊಂಡು ಬಂದವರಿಗೆ ಚಿಕಿತ್ಸೆ ನೀಡುವುದು ಅರ್ಜಿದಾರರ ಕರ್ತವ್ಯ. ವೈದ್ಯನಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಚಿತ್ರದುರ್ಗದಲ್ಲಿ ಎಲ್ಲೋ ಅಪಘಾತ ನಡೆದಿದೆ ಎಂದು ಬಂದರೆ ಸತ್ಯಾಂಶ ಹೇಗೆ ತಿಳಿಯುತ್ತದೆ. ಇದು ಎರಡನೇ ಎಂಎಲ್‌ಸಿ ಎಂದರು.

ಅದಕ್ಕೆ ಒಂದೇ ಅಪಘಾತಕ್ಕೆ ಎರಡು ಎಂಎಲ್‌ಸಿಯಾದರೂ ಹೇಗೆ ಕೊಡುತ್ತೀರಾ? ಅರ್ಜಿದಾರರ ಜನಪ್ರಿಯ ಆಸ್ಪತ್ರೆ ಎಲ್ಲಿದೆ? ಇಂಥ ಕೆಲಸಕ್ಕೆ ಅರ್ಜಿದಾರರು ಜನಪ್ರಿಯರೇ? ಇಂಥ ವೈದ್ಯರಿಂದಲೇ ವಂಚನೆ ಆಗುತ್ತಿರುವುದು. ಅವರು ಕಾನೂನು ಕ್ರಮ ಎದುರಿಸಬೇಕು. ಬೇರೆ ದಾರಿಯೇ ಇಲ್ಲ. ಈಗ ನಾನು ತನಿಖೆಗೆ ತಡೆಯಾಜ್ಞೆ ನೀಡಿದರೆ, ಇದೇ ಪ್ರಕರಣದಲ್ಲಿ ಅರ್ಜಿದಾರರು ಮೂರನೇ ಎಂಎಲ್‌ಸಿ ನೀಡುತ್ತಾರೆ. ಹೀಗಾಗಿ ಯಾವುದೇ ದಯೆ ತೋರಿಸಲಾಗದು. ತನಿಖೆ ಮುಂದುವರಿಯಲಿ ಎಂದು ಕಟುವಾಗಿ ನುಡಿದರು.