ಕನ್ನಡಪ್ರಭ ವಾರ್ತೆ ಮೈಸೂರು

ಅಧಿಕಾರ ಹಸ್ತಾಂತರದ ವಿಚಾರ ಸ್ಪಷ್ಟ ಆಗೋದು ಇನ್ನುಷ್ಟು ವಿಳಂಬವಾದರೆ ಅಪಘಾತ ಮತ್ತು ಆಘಾತ ಎರಡು ಆಗುತ್ತೆ. ಇದು ಬಹಳ ಸಮೀಪಕ್ಕೆ ಬಂದಿದೆ. ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಎಚ್ಚರಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನದ ಆಕ್ಷಾಂಕಿಗಳು ಪಟ್ಟಿಯು ದೊಡ್ಡದಿದೆ, ಸಿಎಂ ಆಗುವವರ ಪಟ್ಟಿಯೂ ಬೆಳೆಯುತ್ತಿದೆ. ಯಾವ ಸಂದರ್ಭದಲ್ಲಿ ಏನೂ ಮಾತಾಗಿತ್ತು ನಮಗೆ ಗೊತ್ತಿಲ್ಲ. ಅಧಿಕಾರ ಹಸ್ತಾಂತರದ ವಿಚಾರ ಏನಾದರೂ ಇದ್ದರೆ ಅದನ್ನು ಕ್ಲೀಯರ್ ಮಾಡಿ. ಇಲ್ಲದಿದ್ದರೆ ದೊಡ್ಡ ಸಮಸ್ಯೆ ಆಗುವುದು ಖಚಿತ ಎಂದು ಹೇಳಿದರು.

ಸಿದ್ದರಾಮಯ್ಯ ಎಷ್ಟು ದಿನ ಇರುತ್ತಾರೋ? ಯಾರಾದರೂ ಬೇರೆಯವರು ಬರುತ್ತಾರಾ? ಇಲ್ವಾ? ಯಾವುದೂ ಗೊತ್ತಿಲ್ಲ. ಬದಲಾವಣೆ ಮಾಡುವುದಾದರೆ ಯಾವಾಗ ಮಾಡ್ತಿರಿ? ಇಲ್ಲ ಮಾಡಲ್ವಾ ಸರಿಯಾಗಿ ಹೇಳಿ. ಸುರ್ಜೇವಾಲ ಅವರಿಗೆ ಇಡೀ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ಏನಾದರೂ ನಿರ್ಧಾರ ಕೈಗೊಳ್ಳಿ. ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿ ಎಂದು ಅವರು ಆಗ್ರಹಿಸಿದರು.

ಯತೀಂದ್ರ ಹೇಳಿಕೆ ಹೈಕಮಾಂಡ್ ಮಾತಲ್ಲ


ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವಾಗಿ ಯಾರಿಂದಲೂ ಪಕ್ಷ ಅಲುಗಾಡಿಸಲು ಸಾಧ್ಯವಿಲ್ಲ. ಯಾರೋ ವೈಯಕ್ತಿಕವಾಗಿ ಹೇಳಿದ ಮಾತು ಅದು ಹೈಕಮಾಂಡ್ ಮಾತಲ್ಲ. ಯಾರು ಹೇಂಗೆ ಬೇಕೋ ಹಾಗೇ ಮಾತಾಡಬಾರದು ಎಂದು ತಿರುಗೇಟು ನೀಡಿದರು.

ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷದಲ್ಲಿ ಇರುವವರು ಅಧಿಕಾರ ಇದ್ದರೂ ಇರುತ್ತಾರೆ, ಇಲ್ಲದಿದ್ದಾರೆ ಇರುತ್ತಾರೆ. ಕೆಲವರು ಅಧಿಕಾರದ ಆಸೆಗಾಗಿ ಪಕ್ಷದ ಜೊತೆ ಸೇರಿಕೊಂಡಿದ್ದಾರೆ. ಅದು ಏನಾಗುತ್ತಾ ಏನೋ ಲೆಕ್ಕಾಚಾರವನ್ನು ಹೈಕಮಾಂಡ್ ಮಾಡುತ್ತಿದೆ ಎಂದು ಅವರು ತಿಳಿಸಿದರು.

----

ಕೋಟ್...

ಕಾಂಗ್ರೆಸ್ ನಲ್ಲಿ ಎಲ್ಲವೂ ಸುಗುಮವಾಗಿಲ್ಲ. ಎಷ್ಟು ವಿಳಂಬ ಆಗುತ್ತಾ ಅಷ್ಟು ನಷ್ಟ ಹೆಚ್ಚಾಗುತ್ತೆ. ಕಾಂಗ್ರೆಸ್ ನಲ್ಲಿ ಬೆಂಕಿಯೂ ಇದೆ. ಹೊಗೆ ಎಲ್ಲಾ ಕಡೆ ಹರಡಿದೆ. ಇದು ಅಪಾಯಕಾರಿ ಬೆಳವಣಿಗೆ ಹಂತಕ್ಕೆ ತಲುಪಿದೆ. ಕಾಂಗ್ರೆಸ್ ನಲ್ಲಿ ಅಶಿಸ್ತು‌ ಎದ್ದು ಕಾಣುತ್ತಿದೆ.

- ತನ್ವೀರ್ ಸೇಠ್, ಕಾರ್ಯಾಧ್ಯಕ್ಷ, ಕೆಪಿಸಿಸಿ