ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಹಿಂದೆ ಕೇವಲ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆ ಇದೀಗ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬಂದು ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಇದು ಮಹಿಳಾ ಸ್ವಾಭಿಮಾನ ಮತ್ತು ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ಮಂಜುನಾಥ್ ಹೇಳಿದರು.ನಗರದ ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.‌ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದರು.ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಅಂಜಿನಪ್ಪ ಮಾತನಾಡಿ ಮಹಿಳೆಯರಿಗೆ ಇಂದು ಎಲ್ಲಾ ಕ್ಷೇತ್ರದಲ್ಲೂ ಪ್ರಾಧಾನ್ಯತೆ ಸಿಗುತ್ತಿದೆ. ಹೆಣ್ಣು ಮಕ್ಕಳು ಮತ್ತಷ್ಟು ಉನ್ನತ ಶಿಕ್ಷಣ ಪಡೆಯಬೇಕು. ತಮ್ಮ ಹಕ್ಕುಗಳ ಬಗ್ಗೆ ಮತ್ತಷ್ಟು ಜಾಗೃತರಾಗಬೇಕು ಎಂದರು.

ಸಮಾಜ ಸೇವಕಿ ಭಾರತಿ ಜೆ.ರೆಡ್ಡಿ ಮಾತನಾಡಿ, ಪ್ರತಿ ಕ್ಷೇತ್ರದಲ್ಲೂ ಮಹಿಳೆ ಪುರುಷರಿಗೆ ಸಮಾನವಾಗಿ ಅಭಿವೃದ್ಧಿ ಹೊಂದುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

‌ನ್ಯಾಷನಲ್ ಪದವಿ ಕಾಲೇಜು ಪ್ರಾಂಶುಪಾಲೆ ಶೈಲಜಾ ಸಪ್ತಗಿರಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು, ಸಂಸಾರದ ಜಂಜಾಟದಲ್ಲಿ ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ, ಉಪಾಧ್ಯಕ್ಷ ಅಂಜಿನಪ್ಪ, ಲಕ್ಕೂರು ಶ್ರೀಧರ್, ಲಕ್ಷ್ಮೀ ನರಸಮ್ಮ, ಸುವರ್ಣ, ಶಿಕ್ಷಕಿ ಚಂದ್ರಕಲಾ, ದೈಹಿಕಶಿಕ್ಷಕಿ ಶಬ್ರೀನ್‌ ತಾಜ್, ಶಿವಶಂಕರ, ಕೃಷ್ಣಪ್ಪ, ಸರೋಜ ಉಪಸ್ಥಿತರಿದ್ದರು.‌