ಡೋನೇಷನ್‌ ಹಾವಳಿ ನಿಯಂತ್ರಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : May 24, 2024 12:54 AM

ಸಾರಾಂಶ

ಯುಕೆಜಿ, ಎಲ್‌ಕೆಜಿ ಹಾಗೂ ಪಿಯು ತರಗತಿಗಳಿಗೆ ₹10 ಸಾವಿರದಿಂದ ₹35 ಸಾವಿರವರೆಗೆ ಪಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ.

ಹರಪನಹಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್‌ ಹಾವಳಿ ನಿಯಂತ್ರಿಸಲು ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಮನಸೋಇಚ್ಛೆ ಪೋಷಕರು ಮತ್ತು ವಿದ್ಯಾಥಿಗಳಿಂದ ಡೊನೇಷನ್ ಅಕ್ರಮವಾಗಿ ವಸೂಲಿ ಮಾಡುತ್ತಿವೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಯುಕೆಜಿ, ಎಲ್‌ಕೆಜಿ ಹಾಗೂ ಪಿಯು ತರಗತಿಗಳಿಗೆ ₹10 ಸಾವಿರದಿಂದ ₹35 ಸಾವಿರವರೆಗೆ ಪಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಇದನ್ನು ಎನ್‌ಎಸ್‌ಯುಐ ತಾಲೂಕು ಸಮಿತಿ ಖಂಡಿಸುತ್ತದೆ ಎಂದು ಹೇಳಿದರು.

ಕೂಡಲೇ ಡೋನೇಷನ್ ನಿಯಂತ್ರಣಕ್ಕಾಗಿ ಇರುವ ಡಿಇಆರ್‌ಎ ಸಮಿತಿ ಸಭೆ ಕರೆಯಬೇಕು. ಸಭೆಗೆ ಎಲ್ಲ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳನ್ನು ವಿದ್ಯಾರ್ಥಿ ಸಂಘಟನೆಗಳನ್ನು ಶಿಕ್ಷಣ ತಜ್ಞರನ್ನು ಕರೆದು ಡೊನೇಶನ್ ಹಾವಳಿ ನಿಯಂತ್ರಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಆರ್‌ಟಿಇ ಪ್ರಕಾರ ಖಾಸಗಿ ಶಾಲೆಗಳಲ್ಲಿ ಖಾಲಿ ಇರುವ ಸೀಟು ಹಾಗೂ ಪಡೆಯುತ್ತಿರುವ ಶುಲ್ಕದ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಹಾಗೂ ಫ್ಲೆಕ್ಸ್ ಮೂಲಕ ಪ್ರಕಟಿಸಬೇಕು. ಈ ಕುರಿತು ಸಾಕಷ್ಟು ಅನುಮಾನಗಳು ಮೂಡಿವೆ. ಶಾಲೆಯಲ್ಲಿ ಶೂ, ಸಾಕ್ಸ್, ನೋಟ್‌ಬುಕ್ ಹಾಗೂ ಇತರ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು ಎನ್ನುವ ನಿಯಮವಿದ್ದರೂ ಪಾಲನೆ ಮಾಡುತ್ತಿಲ್ಲ. ಇಂತಹ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಜರುಗಿಸಬೇಕು.

ಪ್ರತಿ ಖಾಸಗಿ ಶಿಕ್ಷಣ ಸಂಸ್ಥೆಯು ಪ್ರವೇಶಾತಿ ಆರಂಭಿಸುವ ದಿನಾಂಕ ಇಲಾಖೆ ನಿಗದಿಗೊಳಿಸುತ್ತದೆ. ಪ್ರವೇಶಾತಿಯ ವಿವರಣೆ, ಸೀಟುಗಳ ಲಭ್ಯತೆ, ಶುಲ್ಕ ನಿಗದಿ ಕುರಿತು ಇಲಾಖೆಯೊಡನೆ ಚರ್ಚೆನಡೆಸಬೇಕು. ಪ್ರವೇಶಾತಿಯ ಸಂದರ್ಭದಲ್ಲಿ ಕೈಪಿಡಿ ಕಡ್ಡಾಯವಾಗಿ ವಿತರಣೆ ಮಾಡುವಂತಿಲ್ಲ.

ಸರ್ಕಾರ ಖಾಸಗಿ ಶಾಲೆಗಳಿಗೆ ನಿಗದಿಗೊಳಿಸಿರುವ ಡೊನೇಷನ್‌ ಮಾತ್ರವೇ ಪಡೆಯಬೇಕು, ಮಿತಿಮೀರಿ ಶುಲ್ಕ ಕಟ್ಟಿಸಿಕೊಂಡು ರಸೀದಿ ನೀಡದೇ ವಂಚಿಸುತ್ತಿರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ವಿಜಯನಗರ ಜಿಲ್ಲಾ ಉಪಾದ್ಯಕ್ಷ ಎಂ.ಡಿ.ಶ್ರೀಕಾಂತ, ಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸೀಂಡೆಂಕಿ, ತಾಲೂಕು ಅಧ್ಯಕ್ಷ ಎಚ್‌.ಅಬುಸಾಲೇಹ, ವೆಂಕಟೇಶನಾಯ್ಕ, ಅಜಾದ್, ಬಾಲಾಜಿ, ಮುಶ್ರಪ್ ಅಲಿ, ರೇವಣನಾಯ್ಕ, ಮಂಜು, ಸಮೀರ ಇತರರು ಪಾಲ್ಗೊಂಡಿದ್ದರು.

Share this article