ಖಾಸಗಿ ಶಾಲೆಗಳಲ್ಲಿ ಡೊನೇಶನ್‌ ಹಾವಳಿ ತಡೆಗೆ ಒತ್ತಾಯ

KannadaprabhaNewsNetwork | Published : May 24, 2024 12:54 AM

ಸಾರಾಂಶ

ಪಠ್ಯಪುಸ್ತಕಗಳು ಹಾಗೂ ಶಾಲಾ ಸಮವಸ್ತ್ರಗಳ ವಿತರಣೆಯಲ್ಲಿ ಆಡಳಿತ ಮಂಡಳಿ ಮತ್ತು ಅಂಗಡಿಗಳ ಮಧ್ಯೆ ಕಮೀಷನ್ ದಂಧೆ ಜೋರಾಗಿಯೇ ನಡೆಯುತ್ತಿದೆ.

ಹೊಸಪೇಟೆ: ಖಾಸಗಿ ಶಾಲೆಗಳಲ್ಲಿ ಡೊನೇಶನ್‌ ಹಾವಳಿ ತಡೆಗಟ್ಟಬೇಕು ಎಂದು ಎಸ್‌ಎಫ್‌ಐ, ಡಿವೈಎಫ್ಐ ತಾಲೂಕು ಸಮಿತಿಯಿಂದ ಬಿಇಒ ಶರಣಪ್ಪ ಮಗ್ಗದ್‌ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಖಾಸಗಿ ಶಾಲಾ ಸಂಸ್ಥೆಗಳು ಮನ ಬಂದಂತೆ ಡೊನೇಶನ್ ಮತ್ತು ಶುಲ್ಕ ಸಂಗ್ರಹಿಸುತ್ತಿವೆ. ಸರ್ಕಾರದ ಆದೇಶವಿದ್ದರೂ ಅದನ್ನು ಧಿಕ್ಕರಿಸಿ ಶಾಲಾ ಆಡಳಿತ ಮಂಡಳಿ ತಮ್ಮದೇ ನೀತಿಯನ್ನು ರೂಪಿಸಿದೆ. ಪಠ್ಯಪುಸ್ತಕಗಳು ಹಾಗೂ ಶಾಲಾ ಸಮವಸ್ತ್ರಗಳ ವಿತರಣೆಯಲ್ಲಿ ಆಡಳಿತ ಮಂಡಳಿ ಮತ್ತು ಅಂಗಡಿಗಳ ಮಧ್ಯೆ ಕಮೀಷನ್ ದಂಧೆ ಜೋರಾಗಿಯೇ ನಡೆಯುತ್ತಿದೆ. ಈ ರೀತಿಯ ದಂಧೆ ನಡೆಸಲು ಸರ್ಕಾರದಿಂದ ನಿರ್ಬಂಧವಿದ್ದರೂ ಅದನ್ನು ಲೆಕ್ಕಿಸದೇ ಪೋಷಕರಿಗೆ ಶಾಲಾ ಆಡಳಿತ ಮಂಡಳಿಯು ಪಠ್ಯಪುಸ್ತಕ, ಸಮವಸ್ತ್ರ ಖರೀದಿಸಲು ಅಂಗಡಿಯ ವಿಳಾಸದ ಟೋಕನ್ ನೀಡುತ್ತಿದೆ ಎಂದು ದೂರಿದರು.

ಶಾಲಾ ಶುಲ್ಕದ ವಿವರವನ್ನು ನೋಟಿಸ್ ಬೋರ್ಡ್‌ನಲ್ಲಿ ಸಾರ್ವಜನಿಕವಾಗಿ ಹಾಕಲು ಆದೇಶವಿದ್ದರೂ ಹಾಕುತ್ತಿಲ್ಲ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿಯೇ ಶಾಲಾ ಪ್ರವೇಶಾತಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಈಗ ಲೆಕ್ಕಕಷ್ಟೇ ಪ್ರವೇಶಾತಿ ಆರಂಭಿಸಿವೆ.

ಈ ಎಲ್ಲ ವ್ಯವಸ್ಥೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನೋಡಿ ನೋಡದಂತೆ ಸುಮ್ಮನಿದ್ದಾರೆ. ಹಾಗಾಗಿ ಶೀಘ್ರದಲ್ಲಿಯೇ ಸಂಘಟನಾ ಪದಾಧಿಕಾರಿಗಳ ಒಳಗೊಂಡಂತೆ ಸಭೆಯನ್ನು ಕರೆದು ವಂತಿಗೆ ವಿರೋಧಿ ಸಮಿತಿ ರಚಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆದೇಶದಂತೆ ಖಾಸಗಿ ಶಾಲೆಗಳು ಶುಲ್ಕವನ್ನು ಸಂಗ್ರಹಿಸಬೇಕು. ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಪೋಷಕರಿಗೆ ಸ್ವತಂತ್ರವಾಗಿ ಖರೀದಿಸಲು ವ್ಯವಸ್ಥೆ ಮಾಡಬೇಕು. ವಂತಿಗೆ ವಿರೋಧಿ ಸಮಿತಿ ರಚನೆಯಾಗಬೇಕು. ಶುಲ್ಕದ ವಿವರದ ಬೋರ್ಡ್‌ ಸಾರ್ವಜನಿಕವಾಗಿ ಹಾಕಬೇಕು. ಡೊನೇಶನ್ ಹಾವಳಿ ನಿಲ್ಲಿಸಲು ಸಾರ್ವಜನಿಕವಾಗಿ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು, ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ರೂಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವ ಕೇಂದ್ರಿಯ ಶಾಸನ ಜಾರಿಗೆ ತರಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ, ಶಾಸಕರು ಹಾಗೂ ತಹಸೀಲ್ದಾರರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಣ ಇಲಾಖೆಯ ಮುಖ್ಯಸ್ಥರು, ಪಾಲಕರು ವಿದ್ಯಾರ್ಥಿ ಯುವಜನ ಸಂಘಟನೆಯ ಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಈಡಿಗರ ಮಂಜುನಾಥ, ವಿ.ಸ್ವಾಮಿ, ಬಂಡೆ ತಿರುಕಪ್ಪ, ಅಲ್ತಾಫ್ ಮಖಂದರ್, ಪವನಕುಮಾರ್, ಮೊಹಮ್ಮದ್ ಖಾಲಿದ್, ಮಾಲ್ತೇಶ್ ಮತ್ತಿತರರಿದ್ದರು.

Share this article