ಕಾರಟಗಿ: ಪಟ್ಟಣದ ಬಸ್ ನಿಲ್ದಾಣದ ಬಳಿ ಶನಿವಾರ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದ್ದು, ತಾಲೂಕಿನ ರೈತರಿಗೆ ಬೆಳೆ ಹಾನಿ ಪರಿಹಾರ ಸರ್ಕಾರ ಕೂಡಲೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘದ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಯರಡೊಣಾ ಮಾತನಾಡಿ, ತಾಲೂಕಿನ ಹಲವಡೆ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಅಕಾಲಿಕ ಆಲಿಕಲ್ಲು ಮಳೆಯಿಂದ ಕಠಾವು ಹಂತಕ್ಕೆ ಬಂಧಿರುವ ಭತ್ತ ಸಂಪೂರ್ಣ ನೆಲಕ್ಕುರುಳಿ ಅಪಾರ ಪ್ರಮಾಣ ಬೆಳೆ ನಾಶಗೊಂಡಿದ್ದು, ಇದರಿಂದ ರೈತರ ಅಪಾರ ನಷ್ಟ ಅನುಭವಿಸಿದ್ದಾರೆ.ಈ ಅಕಾಲಿಕ ಆಲಿಕಲ್ಲು ಮಳೆ ರೈತರನ್ನು ಅನಾಥರನ್ನಾಗಿ ಮಾಡಿ ಸಾಲಕ್ಕೆ ಎಡೆ ಮಾಡಿದೆ. ರೈತರು ಬೆಳೆ ಬೆಳೆಯಲು ಅಪಾರ ಪ್ರಮಾಣದ ಹಣ ವ್ಯಯಿಸಿದ್ದಾರೆ. ವ್ಯಯಿಸಿದ ಹಣವೂ ಕೂಡ ಕೈಸೇರದಂತಾಗಿ ರೈತರ ಜೀವನ ಸಂಪೂರ್ಣ ಬರ್ಬಾದ ಆಗಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಬೆಳೆಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ವೀಕ್ಷಣೆಯೊಂದಿಗೆ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಿ ಬೆಳೆಹಾನಿಯಿಂದ ಅತಂತ್ರಗೊಂಡ ರೈತ ಕುಟುಂಬಕ್ಕೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಕೂಡ ಪ್ರಕೃತಿ ವಿಕೋಪದಿಂದ ಹಾನಿಗೊಂಡ ಬೆಳೆ ಪರಿಹಾರ ಇವರೆಗೂ ರೈತರ ಖಾತೆಗೆ ಜಮೆಯಾಗಿರುವುದಿಲ್ಲ. ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರ ಖಾತೆಗೆ ಹಣ ಜಮಾ ಮಾಡಿಸಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.ಇದಕ್ಕೂ ಮುಂಚೆ ರೈತ ಸಂಘಟನೆಯ ಪದಾಧಿಕಾರಿಗಳು, ರೈತರು ರಸ್ತೆಯಲ್ಲಿ ಭತ್ತದ ಕಾಳು ಉದುರಿದ ಭತ್ತದ ಪೈರು ಕೈಯಲ್ಲಿ ಹಿಡಿದುಕೊಂಡು ಕುಳಿತು ಕೂಡಲೆ ಬೆಳೆ ಪರಿಹಾರ ಮೊತ್ತ ರೈತರ ಖಾತೆಗೆ ಜಮೆ ಮಾಡಿಸಬೇಕು ಎಂದು ಘೋಷಣೆ ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಅಧಿಕಾರಿಗೆ ಸಲ್ಲಿಸಿದರು.ಈ ವೇಳೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಮುಖರಾದ ಪಂಪಣ್ಣ ನಾಯಕ, ಫಾಲಾಕ್ಷಪ್ಪ ಯರಡೊಣಿ, ಹನುಮಂತಪ್ಪ, ನಾಗರಾಜ ಉಳೆನೂರ, ದೊಡ್ಡಸ್ವಾಮಿ, ದೊಡ್ಡನಗೌಡ, ಸಂತೋಷ, ಶಿವಪ್ಪ ಜೂರಟಗಿ, ಬಸವರಾಜ ಬಿ, ಆಂಜನೇಪ್ಪ ಉಳೆನೂರ ಸೇರಿದಂತೆ ಇತರರು ಇದ್ದರು.