ಸಿದ್ದಾಪುರ: ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಅವರ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ದೊರೆಯಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಕೋಲಶಿರ್ಸಿ ಸಹಕಾರಿ ಸಂಘದ ಅಧ್ಯಕ್ಷ ಕೆ.ಆರ್. ವಿನಾಯಕ್ ಅಭಿಪ್ರಾಯಪಟ್ಟರು.ಅವರು ತಾಲೂಕಿನ ಕೋಲಶಿರ್ಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಧಾರ್ ಶಿಕ್ಷಣ, ಸ್ವ-ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಘಟಿಸಿರುವ ಪತ್ರಕರ್ತ ದಿ.ಶಿವಶಂಕರ್ ಕೋಲಶಿರ್ಸಿ ಅವರ ನೆನಪಿನ ಕಲರವ- ೨೦೨೫ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಸದಾಕಾಲ ಮನೆಯಲ್ಲಿ ಮೊಬೈಲ್, ಟಿವಿ ಮುಂದೆ ಕುಳಿತು ಕಾಲಹರಣ ಮಾಡುತ್ತಾರೆ. ಇಂತಹ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಜೊತೆಗೆ ಮೊಬೈಲ್, ಟಿವಿಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಸದಾಕಾಲ ಚಟುವಟಿಕೆಯಿಂದ ಲವಲವಿಕೆಯಿಂದ ಇರಲು ಅವಶ್ಯವಾಗಿವೆ ಎಂದರು.ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಕೊಳಗಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಶಿಬಿರಗಳಲ್ಲಿ ಪ್ರತಿಭೆಗಳ ಅನ್ವೇಷಣೆಯಾಗುತ್ತದೆ. ಪಾಲಕರು ಇಂತಹ ಕಲಿಕೆಗಳನ್ನು ನೀಡಿದಾಗ ಮಕ್ಕಳ ಮುಂದಿನ ಜೀವನಕ್ಕೆ ಉಪಯುಕ್ತವಾಗುತ್ತದೆ ಎಂದರು.
ಆಧಾರ್ ಶಿಕ್ಷಣ, ಸ್ವ-ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ್ ಮಾಳ್ಕೋಡ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ್ ನಾಯ್ಕ್, ಕೋಲಶಿರ್ಸಿ ಗ್ರಾಪಂ ಸದಸ್ಯ ಗೋವಿಂದ ಬಿ. ನಾಯ್ಕ್, ಎಸ್ಡಿಎಂಸಿ ಅಧ್ಯಕ್ಷ ಕೆರಿಯ ಆರ್. ನಾಯ್ಕ್, ಬಿಎಸ್‌ಎನ್‌ನ್ಡಿಪಿ ತಾಲೂಕ ಅಧ್ಯಕ್ಷ ವಿನಾಯಕ ನಾಯ್ಕ ದೊಡ್ಡಗದ್ದೆ ಮಾತನಾಡಿದರು. ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಕೆ. ಆರ್. ನಾಯ್ಕ್ ಕೋಲಶಿರ್ಸಿ, ಕರಾಟೆ ತರಬೇತುದಾರ ಪುನೀತ ನಾಯ್ಕ ಕೊಂಡ್ಲಿ ಇದ್ದರು.ಬಿ.ಎನ್. ಪ್ರೇರಣ, ಪ್ರಾರ್ಥನಾ ಪ್ರಾರ್ಥಿಸಿದರು. ಶಿಬಿರದ ಸಂಯೋಜಕ ಪ್ರಶಾಂತ ಡಿ. ಶೇಟ್ ಸ್ವಾಗತಿಸಿದರು. ಸಂಸ್ಥೆಯ ಸಂಯೋಜಕ ಸುರೇಶ ಕಡಕೇರಿ ನಿರೂಪಿಸಿದರು. ಟಿ.ಕೆ.ಎಂ. ಆಜಾದ್ ವಂದಿಸಿದರು.
ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಕೆ.ಆರ್.ವಿನಾಯಕ ಮಾತನಾಡಿದರು.