ಬಿಜೆಪಿಯವರು ಜನಾಕ್ರೋಶದ ಬದಲು ಪಶ್ಚಾತ್ತಾಪದ ಯಾತ್ರೆ ಮಾಡಲಿ : ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್

KannadaprabhaNewsNetwork | Updated : Apr 14 2025, 12:24 PM IST

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ₹50ರ ಸನಿಹದಲ್ಲಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಇದೀಗ ನೂರರ ಗಡಿ ದಾಟಿದೆ. ಗ್ಯಾಸ್‌ ಬೆಲೆ ಸಾವಿರ ರುಪಾಯಿ ಗಡಿ ದಾಟಿದೆ.

ಹುಬ್ಬಳ್ಳಿ: ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಕೈಗೊಳ್ಳುತ್ತಿರುವುದು ಹಾಸ್ಯಾಸ್ಪದ. ಅದರ ಬದಲು ಪಶ್ಚಾತ್ತಾಪದ ಯಾತ್ರೆ ಮಾಡಲಿ ಎಂದು ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ. ಆದರೆ, ಕೇಂದ್ರ ಸರ್ಕಾರ ಕೂಡ ಇಂಧನ, ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಾಕಷ್ಟು ಬೆಲೆ ಏರಿಕೆಯಾಗಿದೆ. ಹೀಗಾಗಿ ಜನಾಕ್ರೋಶ ಮಾಡುವ, ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಕೇಂದ್ರದ ವಿರುದ್ಧ ಹೋರಾಡಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ₹50ರ ಸನಿಹದಲ್ಲಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಇದೀಗ ನೂರರ ಗಡಿ ದಾಟಿದೆ. ಗ್ಯಾಸ್‌ ಬೆಲೆ ಸಾವಿರ ರುಪಾಯಿ ಗಡಿ ದಾಟಿದೆ. ಇದಕ್ಕೆ ನಾವು ಕಾರಣವಾ? ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಕೇಂದ್ರ ಸರ್ಕಾರ ಕೂಡ ಬೆಲೆ ಏರಿಕೆ ಮಾಡಿರುವುದರಿಂದ ತಮ್ಮ ಸರ್ಕಾರದ ವಿರುದ್ಧ ಮೊದಲು ಹೋರಾಟ ಮಾಡಲಿ ಎಂದರು.

ಕೇಂದ್ರದಿಂದ ಮಲತಾಯಿ ಧೋರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಸಹಾಯ ಕೋರಿ ಮನವಿ ಸಲ್ಲಿಸಿದರು. ಆದರೆ, ಇದುವರೆಗೂ ಒಂದೇ ಒಂದು ಬೇಡಿಕೆಯನ್ನು ಪ್ರಧಾನಿ ಈಡೇರಿಸಿಲ್ಲ. ರಾಜ್ಯದಿಂದ ಐದು ಕೇಂದ್ರ ಸಚಿವರಿದ್ದರೂ ಮಲತಾಯಿ ಧೋರಣೆಯನ್ನು ಕೇಂದ್ರ ಸರ್ಕಾರ ಎಸಗುತ್ತಿದೆ. ರಾಜ್ಯಕ್ಕೆ ಬರುವ ಪಾಲು ಏಕೆ ನೀಡುತ್ತಿಲ್ಲ ಎಂದರು.

ನುಡಿದಂತೆ ನಡೆದಿದ್ದೇವೆ: ನಮ್ಮ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡುವ ಮೂಲಕ ನುಡಿದಂತೆ ನಡೆದಿದೆ. ಎಲ್ಲ ವರ್ಗದವರ ಹಿತ ಕಾಪಾಡುವ ಕಾರ್ಯ ನಡೆದಿದೆ. ಇದರಿಂದ ಜನರು ಸಂತೋಷದಿಂದ ಜೀವಿಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಧೈರ್ಯ ಇದ್ದರೆ ಗ್ಯಾರಂಟಿ ಸರಿಯಾಗಿಲ್ಲ, ಬಂದ್‌ ಮಾಡಿ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಆದರೆ, ಇದೆಲ್ಲವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ವ ಸಮಾಜದ ಹಿತಕ್ಕೆ ಬದ್ಧ: ಜಾತಿಗಣತಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಮಾಜದ ಎಲ್ಲ ವರ್ಗದ ಹಿತ ಕಾಪಾಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಜಾತಿಗಣತಿ ಸಮೀಕ್ಷೆ ಬಿಡುಗಡೆಯಾಗಿದೆ. ನಮ್ಮ ಸರ್ಕಾರದಲ್ಲಿ ಯಾವುದೇ ಸಮಾಜಕ್ಕೆ ಅನ್ಯಾಯವಾಗಲ್ಲ, ಸರ್ವ ಸಮಾಜದ ಹಿತಕ್ಕೆ ಬದ್ಧವಾಗಿದ್ದೇವೆ. ಸಚಿವರಿಗೆ ಮುಖ್ಯಮಂತ್ರಿಗಳು ಜಾತಿಗಣತಿ ವರದಿಯನ್ನು ಅಧ್ಯಯನ ಮಾಡಲು ಹೇಳಿದ್ದಾರೆ. ಅಂತಿಮವಾಗಿ ಏ. 17ರಂದು ತೀರ್ಮಾನ ಕೈಗೊಳ್ಳುತ್ತಾರೆ. ಇದನ್ನು ಅಧಿವೇಶನದಲ್ಲಿ ಚರ್ಚೆ ಮಾಡುವುದಾಗಿ ಕೂಡ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದರಲ್ಲಿ ಏನಾದರೂ ಸಣ್ಣಪುಟ್ಟ ಬದಲಾವಣೆಗಳಿದ್ದಲ್ಲಿ ಎಲ್ಲವೂಗಳನ್ನು ಸರಿಪಡಿಸಲಿದ್ದಾರೆ ಎಂದರು.

ಪಕ್ಷ ಸಂಘಟನೆಗೆ ಆದ್ಯತೆ: ಗುಜರಾತಿನಲ್ಲಿ ಈಚೆಗೆ ಎಐಸಿಸಿ ಸದಸ್ಯರ ಸಮಾವೇಶ ಜರುಗಿತು. ಅಲ್ಲಿ ದೇಶದಲ್ಲಿ ಪಕ್ಷ ಸಂಘಟನೆ ಮಾಡಲು ಹೆಚ್ಚಿನ ಪ್ರಾಶಸ್ತ್ಯ ನೀಡಲು ನಿರ್ಧರಿಸಲಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷರು, ಜಿಲ್ಲಾ ಕಮಿಟಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅದೇ ರೀತಿ ತಾಪಂ, ಜಿಪಂ ಚುನಾವಣೆ ದೃಷ್ಟಿಯಿಂದ ಈಗಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಮೇ 20ಕ್ಕೆ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿದೆ. ಹೀಗಾಗಿ, ಎರಡು ವರ್ಷಗಳ ಸಾಧನಾ ಸಮಾವೇಶ ಮಾಡುವ ನಿರ್ಧಾರ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಲ್ಲಿ, ಯಾವಾಗ ಸಮಾವೇಶ ಮಾಡಬೇಕು ಎಂಬ ತೀರ್ಮಾನ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ಹಲವರಿದ್ದರು.

ದಾರಿ ತಪ್ಪಿದ ಮಕ್ಕಳು: ಬೆಲೆ ಏರಿಕೆ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಬೇರೆ ಬೇರೆಯಾಗಿ ಯಾತ್ರೆ ಮಾಡುತ್ತಿವೆ. ದೇವೇಗೌಡರು ಪ್ರಧಾನಿಯಾಗಲು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಬೇಕಪ್ಪ ಬೇಕು, ಈಗ ಸಾಕಪ್ಪ ಸಾಕು ಎನ್ನುತ್ತಿದ್ದಾರೆ. ವಿಜೇಯೇಂದ್ರ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ದಾರಿ ತಪ್ಪಿದ ಮಕ್ಕಳಾಗಿದ್ದಾರೆ ಎಂದರು.

Share this article