- ಕಾಂಗ್ರೆಸ್ ಸರ್ಕಾರದಲ್ಲಿ ವಿಪಕ್ಷ ಶಾಸಕರಿಗೆ ಬೆಲೆ ಇಲ್ಲ: ಹರೀಶ್
- - -ಹರಿಹರ: ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ರಾಜಕೀಯ ಅನುಭವದ ಕೊರತೆ ಇದೆ. ಹೀಗಾಗಿ ತಾಲೂಕಿಗೆ ಸೂಕ್ತ ಅಧಿಕಾರಿಗಳ ನೇಮಕವಾಗದೇ ಲೋಕಾಯುಕ್ತ ಕೇಸುಗಳು ಹೆಚ್ಚಳ ಆಗುತ್ತಿವೆ ಎಂದು ಶಾಸಕ ಬಿ.ಪಿ. ಹರೀಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ನಗರಸಭಾ ಕಚೇರಿಯಲ್ಲಿ ಲೋಕಾಯುಕ್ತರು ದಾಖಲಾತಿ ಪರಿಶೀಲನೆ ವೇಳೆ ಹಲವು ಅಧಿಕಾರಿಗಳ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಇದು ಕೇವಲ ಹರಿಹರ ಮಾತ್ರವಲ್ಲ, ಇಡೀ ರಾಜ್ಯದ ವ್ಯವಸ್ಥೆಯೇ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ ಎಂದರು.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ವಿಪಕ್ಷದ ಶಾಸಕರ ಯಾವುದೇ ಬೇಡಿಕೆಗೆ ಬೆಲೆ ಇಲ್ಲದಂತಾಗಿದೆ. ಅದೇ ಕಾಂಗ್ರೆಸ್ ಮುಖಂಡರು ಯಾವ ಅಧಿಕಾರಿಗಳನ್ನು ಸೂಚಿಸುತ್ತಾರೋ ಅದೇ ಅಧಿಕಾರಿಗಳನ್ನು ಜಿಲ್ಲಾ ಸಚಿವರು ನೇಮಿಸಲು ಶಿಫಾರಸು ಮಾಡುತ್ತಾರೆ ಎಂದರು.
ಕ್ರಿಯಾಶೀಲ ಅಧಿಕಾರಿಗಳನ್ನು ನೇಮಕ ಮಾಡಿದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಆದರೆ, ರಾಜಕೀಯ ಅನುಭವ ಕೊರತೆ ಇರುವ ಕಾಂಗ್ರೆಸ್ ಮುಖಂಡರು ತಮಗೆ ಬೇಕಾದ ಅಧಿಕಾರಿಗಳನ್ನು ಹರಿಹರ ಕ್ಷೇತ್ರಕ್ಕೆ ಹಾಕಿಸಿಕೊಳ್ಳುತ್ತಿದ್ದಾರೆ. ಈ ಕಾರಣ ಲೋಕಾಯುಕ್ತ ಕೇಸುಗಳು ಕ್ಷೇತ್ರದಲ್ಲಿ ದಾಖಲಾಗುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಶ್ರೀನಿವಾಸ್ ನಂದಿಗಾವಿ ಹೆಸರು ಹೇಳದೇ ಶಾಸಕರು ಬೇಸರ ವ್ಯಕ್ತಪಡಿಸಿದರು.ಭ್ರಷ್ಟಾಚಾರದ ವ್ಯವಸ್ಥೆಯನ್ನು ಕೇವಲ ಅಧಿಕಾರಿಗಳಿಂದ ಬದಲಾವಣೆ ಮಾಡುತ್ತೇವೆ ಎಂಬುವುದಕ್ಕಿಂತ ರಾಜಕೀಯ ಮುಖಂಡರು ಸಹ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಆಗ ಮಾತ್ರ ಸಾರ್ವಜನಿಕರಿಗೆ ಸುಸಜ್ಜಿತ ಆಡಳಿತ ಕೊಡಲು ಸಾಧ್ಯ. ಅಧಿಕಾರಿಗಳ ಬಗ್ಗೆ ಬೇಸರಗೊಂಡಿರುವ ಸಾರ್ವಜನಿಕರು ಮಿತಿಮೀರಿದ ಅವ್ಯವಸ್ಥೆ ವಿರುದ್ಧ ಹೋರಾಟ ಮಾಡುವ ಮನೋಭಾವನೆ ಕಳೆದುಕೊಂಡಿದ್ದಾರೆ. ಇಂತಹ ದುಸ್ಥಿತಿಗೆ ಆಡಳಿತ ವ್ಯವಸ್ಥೆ ಬಂದು ನಿಂತಿದೆ ಎಂದರು.
ಬಿಸಿಲಿನ ತಾಪ ಹೆಚ್ಚುತ್ತಿರುವ ಕಾರಣ ಶೀಘ್ರದಲ್ಲೇ ಕೆಡಿಪಿ ಅಧಿಕಾರಿಗಳ ಸಭೆ ಕರೆದು ತಾಲೂಕಿನಲ್ಲಿ ಜನರಿಗೆ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದು, ಇತರೇ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.- - -
-10ಎಚ್‍ಆರ್‍ಆರ್04.ಜೆಪಿಜಿ: ಬಿ.ಪಿ. ಹರೀಶ