ಕುಮಟಾ: ವಿದ್ಯಾರ್ಥಿ ಜೀವನದಲ್ಲಿ ಪ್ರತಿದಿನದ ಕಲಿಕೆಗೆ ವಿಶೇಷ ಮಹತ್ವ ಇದೆ. ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನವಿದೆ. ಬೇಸಿಗೆ ಶಿಬಿರವು ಮಕ್ಕಳ ಮನೋವಿಕಾಸಕ್ಕೆ ದಾರಿದೀಪವಿದ್ದಂತೆ. ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಇಂಥ ಉಪಯುಕ್ತ ಶಿಬಿರಗಳನ್ನು ನೀಡುತ್ತಿರುವ ಸಾಕ್ಷಿ ಶಿಕ್ಷಕರ ಬಳಗದ ಕಾರ್ಯ ಶ್ಲಾಘನೀಯ ಎಂದು ದೇವಗಿರಿ ಗ್ರಾಪಂ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಹೇಳಿದರು.
ತಾಲೂಕಿನ ಹರ್ನಿರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷಿ ಶಿಕ್ಷಕರ ಬಳಗದಿಂದ ಕಲಿಯೋಣ ಕಲಿಸೋಣ ಎಂಬ ೨ ದಿನದ ರಜಾ ಶಿಬಿರದಲ್ಲಿ ಮಕ್ಕಳೊಂದಿಗೆ ಚಿತ್ರ ರಚಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಅತಿಥಿ ಹೊನ್ನಾವರ ಬಿಇಒ ಜಿ.ಎಸ್.ನಾಯ್ಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆದರ್ಶ ಬದುಕಿನ ಕನಸು ಕಾಣಬೇಕು. ಗುರು- ಹಿರಿಯರನ್ನು ಗೌರವಿಸಬೇಕು. ಮಹಾಪುರುಷರ ಬದುಕಿನ ಯಶೋಗಾಥೆ ತಿಳಿದುಕೊಳ್ಳಬೇಕು ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಮಕ್ಕಳಲ್ಲಿ ಸುತ್ತಲ ಪರಿಸರ ಜ್ಞಾನ ಅಗತ್ಯ. ಶಿಕ್ಷಕರು ಅವರ ಬದುಕಿಗೆ ಪೂರಕ ಚಟುವಟಿಕೆ ಹಮ್ಮಿಕೊಂಡಾಗಲೇ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಭಟ್ ಸೂರಿ ಮಾತನಾಡಿ, ಮಕ್ಕಳಿಗೆ ಬದುಕುವ ಕಲೆ ಕಲಿಸುವ ಜತೆಗೆ ಜೀವನ ಮೌಲ್ಯಗಳನ್ನು ಬಿತ್ತುವ ಕೆಲಸವಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ವೀಣಾ ದುರ್ಗೇಕರ ಶುಭ ಕೋರಿದರು.ಅತಿಥಿ ಪ್ರಭಾರೆ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಹೆಗಡೆ, ಹಳೆ ವಿದ್ಯಾರ್ಥಿ ಸಂಘದ ಬಾಬು ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯಾಧ್ಯಾಪಕ ಸುರೇಶ ಶೇಟ್, ಪ್ರಕಾಶ ಶೇಟ್, ಸಂಜೀವ ಉಪಸ್ಥಿತರಿದ್ದರು. ಧೃತಿ ನಾಯ್ಕ ಪ್ರಾರ್ಥನಾ ಗೀತೆ ಹಾಡಿದರು. ನಾಗರಾಜ ಪಟಗಾರ ಸ್ವಾಗತಿಸಿದರು, ಶೈಲಾ ಗುನಗಿ ವಂದಿಸಿದರು. ಬಳಗದ ಸಂಚಾಲಕ ಜನಾರ್ಧನ ಹರ್ನಿರು ಪ್ರಾಸ್ತಾವಿಕ ಮಾತನಾಡಿದರು. ಸುಬ್ರಾಯ ಶಾನಭಾಗ ನಿರೂಪಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂಜೀವ, ವಿ.ಜಿ.ನಾಯ್ಕ, ಪಿ.ಆರ್.ನಾಯ್ಕ, ವಿನಾಯಕ ಮುಕ್ರಿ, ಕೃಷ್ಣ ಅಂಬಿಗ, ಮಂಜುಳಾ ಬಳಗು, ಶಶಿಧರ ದೇವಾಡಿಗ ಇನ್ನಿತರರು ಶಿಬಿರದಲ್ಲಿ ಕಥೆ, ಕವನ ಕಟ್ಟುವ ಪ್ರಾತ್ಯಕ್ಷಿಕೆ ನಡೆಸಿದರು. ಚಿತ್ರಕಲೆ, ಕ್ರಾಫ್ಟ್, ಹಾಡು, ನೃತ್ಯ, ಸುಂದರ ಬರವಣಿಗೆ, ಬಣ್ಣದ ಕಲ್ಪನೆ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಿದರು.