ಆರ್‌ಎಸ್‌ಎಸ್ ಸಂಸ್ಕಾರ ದೊಡ್ಡಮಟ್ಟಕ್ಕೆ ಬೆಳೆಸುತ್ತದೆ

KannadaprabhaNewsNetwork |  
Published : Apr 14, 2025, 01:24 AM IST
4444444444 | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿವಾರದಲ್ಲಿ ಶಿಸ್ತು ಪಾಲಿಸಿಕೊಂಡು ಬಂದ ಸ್ವಯಂ ಸೇವಕರು ಹಂತ, ಹಂತವಾಗಿ ಎತ್ತರ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯರು ಹಾಗೂ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಸುರೇಶ್ ಜೋಶಿ ಬಯಾಜೀ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿವಾರದಲ್ಲಿ ಶಿಸ್ತು ಪಾಲಿಸಿಕೊಂಡು ಬಂದ ಸ್ವಯಂ ಸೇವಕರು ಹಂತ, ಹಂತವಾಗಿ ಎತ್ತರ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯರು ಹಾಗೂ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಸುರೇಶ್ ಜೋಶಿ ಬಯಾಜೀ ಹೇಳಿದರು.

ಪಟ್ಟಣದ ಜೆ.ಇ.ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಸಂಜೆ ಸವ್ಯಸಾಚಿ ಅಭಿನಂದನಾ ಸಮಿತಿ ವತಿಯಿಂದ ಅಥಣಿ ಪಟ್ಟಣದ ಆರ್‌ಎಸ್‌ಎಸ್‌ ಹಿರಿಯ ಮುಖಂಡ ಅರವಿಂದರಾವ್ ದೇಶಪಾಂಡೆ ಅವರ ಅಮೃತ ಮಹೋತ್ಸವದ ಕಾರ್ಯಕ್ರಮದ ನಿಮಿತ್ತ ಪ್ರಕಟಗೊಂಡಿರುವ ಸವ್ಯಸಾಚಿ ಅಭಿನಂದನ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವುದೇ ಆಡಂಬರ ಪ್ರಚಾರವಿಲ್ಲದೇ ಶಿಸ್ತಿನಿಂದ ದೇಶಕ್ಕಾಗಿ ಯಾವುದೇ ಪಲಾಪೀಕ್ಷೆ ಇಲ್ಲದೆ ಸ್ವಯಂಸೇವೆ ಮಾಡುವ ಸಂಘವಾಗಿದೆ. ಸಂಘದ ಸದಸ್ಯರು ಇಲ್ಲಿ ಕಲಿಯುವ ಶಿಸ್ತು ಮತ್ತು ಸಂಸ್ಕಾರದಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರಾಷ್ಟ್ರದ ಶಕ್ತಿಗಳಾಗಿ ಬೆಳೆಯುತ್ತಾರೆ. ಅದಕ್ಕೆ ಅರವಿಂದ ರಾವ್ ದೇಶಪಾಂಡೆ ಅವರ ಕಾರ್ಯವೇ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಸು.ರಾಮಣ್ಣ ಅಭಿನಂದನಾ ಪರ ನುಡಿಗಳನ್ನು ವ್ಯಕ್ತಪಡಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಕೆಲಸ ಮಾಡಿದ ಅರವಿಂದ್ ರಾವ್ ದೇಶಪಾಂಡೆ ಅವರ ಕಾರ್ಯವನ್ನು ಸ್ಮರಿಸಿ ಅವರ 75 ವಸಂತಗಳ ಸಂದರ್ಭದಲ್ಲಿ ಕೇವಲ ಕುಟುಂಬದಿಂದ, ಸಮಾಜ ಬಂಧುಗಳಿಂದ ಮಾತ್ರವಲ್ಲದೆ ರಾಷ್ಟ್ರೀಯ ಬಂಧು ಬಾಂಧವರಿಂದ ಇಂತಹ ಅಮೃತ ಮಹೋತ್ಸವ ಆಯೋಜಿಸಿರುವುದು ಸಾರ್ಥಕ ಕಾರ್ಯಕ್ರಮವಾಗಿದೆ. ಅವರು ನೂರು ವಸಂತುಗಳನ್ನು ಪೂರೈಸಲಿ, ಇನ್ನಷ್ಟು ರಾಷ್ಟ್ರಕ್ಕಾಗಿ ಅವರ ಸೇವೆ ಸಲ್ಲಲಿ ಎಂದು ಶುಭ ಹಾರೈಸಿದರು.ಜಾಧವ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅನಿಲರಾವ ದೇಶಪಾಂಡೆ ಮಾತನಾಡಿ, ಜೆ.ಇ.ಶಿಕ್ಷಣ ಸಂಸ್ಥೆಯು ಶತಮಾನೋತ್ಸವ ಆಚರಿಸಿಕೊಂಡ ಶಿಕ್ಷಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಬೆಳವಣಿಗೆಯಲ್ಲಿ ಅರವಿಂದ್ ರಾವ್ ದೇಶಪಾಂಡೆ ಅವರು ಕಳೆದ 20 ವರ್ಷಗಳವರೆಗೆ ಕಾರ್ಯಧ್ಯಕ್ಷರಾಗಿ ಮಾಡಿದ ಪ್ರಗತಿ ಕಾರ್ಯಗಳು ಅಪಾರ. ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಮಾರ್ಗದರ್ಶನ ನಿರಂತರವಾಗಿರಲಿ, ಅವರಿಗೆ ದೇವರು ಇನ್ನಷ್ಟು ಆಯುಷ್ಯ ಆರೋಗ್ಯ ಕರುಣಿಸಲಿ ಎಂದು ಶುಭಕೋರಿದರು.ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಮತ್ತು ಸಾವುಗಳ ಮಧ್ಯದ ಬದುಕು ಶ್ರೇಷ್ಠ ಮತ್ತು ಸುಂದರವಾಗಿರಬೇಕು. ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಶ್ರಮಿಸುವ ವ್ಯಕ್ತಿಗಳನ್ನು ಸಮಾಜ ಖಂಡಿತವಾಗಿಯೂ ಗೌರವಿಸುತ್ತದೆ. ಸಮಾಜಮುಖಿ ಸೇವೆ ಸಲ್ಲಿಸುವ ಹಿರಿಯರನ್ನು ಗೌರವಿಸುವುದು ಮತ್ತು ಅವರ ಸೇವೆಯನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾದ ವಿಚಾರಗಳನ್ನು ತಿಳಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ ಎಂದು ನುಡಿದರು.

ಸವ್ಯಸಾಚಿ ಅಭಿನಂದನಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರವಿಂದ್ ರಾವ್ ದೇಶಪಾಂಡೆ ಮತ್ತು ತಮ್ಮ ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾಗಿ ಅರವಿಂದ್‌ರಾವ ಮಾಡಿದ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.ಅರವಿಂದ್ ರಾವ್ ದೇಶಪಾಂಡೆ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಬಾಲ್ಯದಿಂದ ಆರ್‌ಎಸ್‌ಎಸ್‌ ಸಂಘದಲ್ಲಿ ಇದ್ದೇನೆ. ಸಂಘದ ಸಂಸ್ಕಾರವೇ ನನ್ನನ್ನು ಇಷ್ಟು ದೊಡ್ಡ ಮಟ್ಟ ಎತ್ತರಕ್ಕೆ ಬೆಳೆಸಿದೆ. ನಾನು ಒಬ್ಬ ಸ್ವಯಂಸೇವಕನಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತ ಮಾಡುವ ಕೆಲಸಗಳನ್ನು ಮಾಡಿದ್ದೇನೆ. ಅವುಗಳನ್ನೇ ತಾವು ದೊಡ್ಡ ಕಾರ್ಯಗಳೆಂದು ಗುರುತಿಸಿ ನನ್ನನ್ನು ಇಂದು ಅಭಿನಂದಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ, ಸವ್ಯಸಾಚಿ ಅಭಿನಂದನಾ ಸಮಿತಿಯ ಸರ್ವ ಸದಸ್ಯರಿಗೆ, ಜಾಧವಜಿ ಶಿಕ್ಷಣ ಸಂಸ್ಥೆಯ ಪರಿವಾರದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅಯೋಧ್ಯ ರಾಮಮಂದಿರದ ರಾಮಲಲ್ಲ ಮೂರ್ತಿಯ ಶಿಲ್ಪಿ ಅರುಣ ಯೋಗಿರಾಜ ಅವರಿಗೆ 75 ವರ್ಷಗಳ ಅಮೃತ ಮಹೋತ್ಸವದ ಅಂಗವಾಗಿ ಅರವಿಂದ್ ರಾವ್ ದೇಶಪಾಂಡೆ ದಂಪತಿಗೆ ಶಿಲ್ಪಕಲೆಯ ಕಾಯಕವನ್ನು ಗೌರವಿಸಿ ₹75 ಸಾವಿರ ಕಾಣಿಕೆ ನೀಡಿ ಸನ್ಮಾನಿಸಿದರು.ಈ ಸಮಾರಂಭದಲ್ಲಿ ಸವ್ಯಸಾಚಿ ಅಭಿನಂದನಾ ಗ್ರಂಥದ ಸಂಪಾದಕ ಮಂಡಳಿಯ ಸದಸ್ಯರಾದ ಡಾ.ಬಾಳಾಸಾಹೇಬ ಲೋಕಾಪುರ, ಡಾ.ವಿ.ಎಸ್.ಮಾಳಿ, ನೀಲೇಶ್ ಝರೆ, ಬಸವರಾಜ ಡೋಣೂರು, ಜಾಧವಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ರಾಮ ಕುಲಕರ್ಣಿ, ಅಭಿನಂಂದನಾ ಸಮಿತಿ ಕಾರ್ಯಧ್ಯಕ್ಷ ಗಜಾನನ ಮಂಗಸುಳಿ, ಮಾಜಿ ಸಿಎಂ, ಲೋಕಸಭಾ ಸದಸ್ಯ ಜಗದೀಶ ಶೆಟ್ಟರ, ನಿಪ್ಪಾಣಿ ಶಾಸಕಿ ಶಶಿಕಲಾ ಜೋಲ್ಲೆ, ಈರಣ್ಣ ಕಡಾಡಿ, ಮಾಜಿ ಶಾಸಕ ಮಹೇಶ್ ಕುಮ್ಟಳ್ಳಿ, ಪಿ.ರಾಜೀವ್, ಶ್ರೀಕಾಂತ ಕುಲಕರ್ಣಿ, ದುರ್ಯೋಧನ ಐಹೊಳೆ, ಅರುಣ್ ಶಹಪುರ್, ಪ್ರಮೋದ್ ಮುತಾಲಿಕ್ ಸೇರಿದಂತೆ ಅನೇಕ ರಾಷ್ಟ್ರೀಯ ಸ್ವಯಂಸೇವಕದ ಮುಖಂಡರು, ಬಿಜೆಪಿ ಮುಖಂಡರು, ಶಿಕ್ಷಣ ಪ್ರೇಮಿಗಳು, ಜಾಧವಜಿ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ರಾಮ ಕುಲಕರ್ಣಿ ಸ್ವಾಗತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಹಚದಡ ಹಾಗೂ ಪ್ರಿಯಂವಧಾ ಹುಲಗಬಾಳಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಸಂದೀಪ ಸಂಗೋರಾಮ ವಂದಿಸಿದರು.

ರಾಷ್ಟ್ರೀಯತೆ ಮತ್ತು ಬಂಧುತ್ವದಿಂದ ಯಾವುದೇ ಭೇದ-ಭಾವವಿಲ್ಲದೇ ಸಂಘದ ಕಾರ್ಯಗಳೊಂದಿಗೆ ಅನೇಕ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿರುವ ಅರವಿಂದ ದೇಶಪಾಂಡೆ ಅವರ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯ.

-ಸುರೇಶ್ ಜೋಶಿ ಬಯಾಜೀ, ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯರು ಹಾಗೂ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡರು.

ಅರವಿಂದ್ ರಾವ್ ದೇಶಪಾಂಡೆ ಅವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಕಾರದಲ್ಲಿ ಬೆಳೆದು ಅನೇಕ ಸಮಾಜಮುಖಿ ಸೇವೆಗಳ ಜೊತೆಗೆ ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಕೆಲಸ ಮಾಡಿದವರು. ಅವರ ಸೇವೆಯನ್ನು ಸ್ಮರಿಸಿ ಸವ್ಯಸಾಚಿ ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸುವುದಲ್ಲದೇ ದಂಪತಿಯ ಸೇವೆಯನ್ನು ಸ್ಮರಿಸಿ ಅಭಿನಂದಿಸುತ್ತಿರುವುದು ಒಳ್ಳೆಯ ಕಾರ್ಯ. ಈ ಕಾರ್ಯವನ್ನು ಅವರು ಸಾರ್ಥಕ ಭಾವದಿಂದ ಸ್ವೀಕರಿಸಬೇಕು.

-ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?