ಮಕ್ಕಳಲ್ಲಿ ಶೈಕ್ಷಣಿಕ, ಧಾರ್ಮಿಕ ಶಕ್ತಿ ಗಟ್ಟಿಯಾಗಲಿ

KannadaprabhaNewsNetwork | Published : Apr 14, 2025 1:25 AM

ಸಾರಾಂಶ

ಧಾರ್ಮಿಕತೆ ಮಕ್ಕಳನ್ನು ಧರ್ಮ, ಸಂಸ್ಕಾರದ ಹಾದಿಯಲ್ಲಿ ಹಾಗೂ ಶಿಕ್ಷಣ ಕತ್ತಲೆಯಿಂದ ಬದುಕಿನತ್ತ ಕೊಂಡೋಯ್ಯುವ ಶಕ್ತಿ ಹೊಂದಿವೆ. ಮಕ್ಕಳಿಗೆ ಶಿಕ್ಷಣ, ಧರ್ಮ, ಅರಿವು ನೀಡುವ ಕಾರ್ಯ ಆಗಬೇಕು

ಕುಕನೂರು: ಧಾರ್ಮಿಕ ಕಾರ್ಯದಲ್ಲಿ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಹೆಮ್ಮೆ ಸಂಗತಿ ಎಂದು ಯಲಬುರ್ಗಾ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ ಅರಳಬೆಂಚಿ ಉಡುರಾಜಮುಖಿ (ಉಡಚಮ್ಮ) ದೇವಿಯ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಾಸಿಕ ಶಿವಾನುಭವ ಅಂಗವಾಗಿ ಯಲಬುರ್ಗಾ ಶ್ರೀಧರ ಮುರುಡಿಮಠದ ಬಸವಲಿಂಗೇಶ್ವರ ಶ್ರೀಗಳ ತುಲಾಭಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಧಾರ್ಮಿಕ ಶಕ್ತಿ ಜತೆಗೆ ಶೈಕ್ಷಣಿಕ ಶಕ್ತಿ ಗಟ್ಟಿಯಾಗಬೇಕು. ಧಾರ್ಮಿಕತೆ ಮಕ್ಕಳನ್ನು ಧರ್ಮ, ಸಂಸ್ಕಾರದ ಹಾದಿಯಲ್ಲಿ ಹಾಗೂ ಶಿಕ್ಷಣ ಕತ್ತಲೆಯಿಂದ ಬದುಕಿನತ್ತ ಕೊಂಡೋಯ್ಯುವ ಶಕ್ತಿ ಹೊಂದಿವೆ. ಮಕ್ಕಳಿಗೆ ಶಿಕ್ಷಣ, ಧರ್ಮ, ಅರಿವು ನೀಡುವ ಕಾರ್ಯ ಆಗಬೇಕು ಎಂದರು.

ಆಧುನಿಕ ಭರಾಟೆಯಲ್ಲಿ ಸಂಬಂಧಗಳ ಕೊಂಡಿ ಸಹ ಕಳಚುತ್ತಿವೆ. ಮಕ್ಕಳಲ್ಲಿ ಬಾಂಧವ್ಯದ ಬೆಸುಗೆ ಬೆಳೆಸಬೇಕು. ಧಾರ್ಮಿಕ ಕಾರ್ಯದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಅವರ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆ ಸಂಗತಿ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ, ಯುವಜನತೆ ಸಂಸ್ಕಾರದೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಭಕ್ತಿಯೆಂಬುದು ಮನಸ್ಸಿನ ಏಕಾಗ್ರತೆಗೆ ಸಂಕೇತ. ದೇವರಲ್ಲಿ ನಂಬಿಕೆ ಇಟ್ಟು ಪ್ರಾರ್ಥಿಸುವುದು ಭಕ್ತಿ ಆಗಿದೆ. ಮನಸ್ಸಿನ ಶಾಂತಿ ಹಾಗೂ ಪ್ರಫುಲ್ಲತೆ ಭಕ್ತಿಯಿಂದ ಸಾಧ್ಯ ಎಂದರು.

ಸಿಂಧನೂರು ತಾಲೂಕಿನ ಉಡ ಗ್ರಾಮದ ಸೂಫಿ, ಸಂತ ತಾತನವರಾದ ಖಾದರ್ ಬಾಷಾನವರು ಮಾತನಾಡಿ, ಮನುಷ್ಯ ತನ್ನ ನೋವು-ಸಂಕಟ ಪರಿಹರಿಸಿಕೊಳ್ಳಲು ಸತ್ಸಂಗದಲ್ಲಿ ತೊಡಗಬೇಕು. ದೇವರು, ಅಲ್ಲಾಹನ ನಾಮಸ್ಮರಣೆ, ಗುರುಗಳಲ್ಲಿ ಭಕ್ತಿ, ಭಾವದಿಂದ ನಡೆದು ಮನಸ್ಸು ಶುದ್ಧವಾಗಿಟ್ಟುಕೊಂಡಾಗ ಮಾತ್ರ ಜೀವನ ಸಾರ್ಥಕಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಭಗವಂತ ಸಿರಿವಂತಿಕೆ ಕೊಡುವುದು ಧಾನ, ಧರ್ಮ ಮಾಡಲು, ಬಡತನ ಕೊಡುವುದು ಧಾನ್ಯಕ್ಕಾಗಿ. ಆರೋಗ್ಯವನ್ನು ಧರ್ಮ ಕಾರ್ಯ ಮಾಡಲು ಕೊಡುತ್ತಾನೆ. ಇಂತಹ ಜೀವನವನ್ನು ಒಳ್ಳೆಯ ಕಾರ್ಯ ಮಾಡಲು ಬಳಸಬೇಕು ಎಂದು ಹೇಳಿದರು.

ಈ ವೇಳೆ ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರ ತುಲಾಭಾರ ಸೇವೆ ನಡೆಯಿತು. ಪ್ರಮುಖರಾದ ನೀಲನಗೌಡ ಪಾಟೀಲ್, ಎಚ್ಚರೇಶ್ವರ ಶಾಸ್ತ್ರಿ, ವೀರನಗೌಡ ಪಾಟೀಲ್, ಖಾದರ ಭಾಷಾ, ಫಕ್ಕಿರಪ್ಪ ವಜ್ರಬಂಡಿ, ಮಲಕಸಾಬ್‌ ನೂರಭಾಷಾ, ಅನ್ನಪ್ಪ ಬಂಗಾರಿ, ಭೀಮಪ್ಪ ಹೇಳವರ, ಬಸವರಾಜ ಸಿರಿಗೇರಿ, ಎಚ್.ಕೆ. ಹೈತಾಪುರ, ಬಸವರಾಜ ಸೋಂಪೂರು, ಪ್ರಿಯದರ್ಶಿನಿ ಮುಂಡರಗಿಮಠ, ಹನುಮಂತಪ್ಪ ಕುಲಕರ್ಣಿ, ಪೂಜಾ ನರಿ, ಷರೀಫ್ ಸಾಬ್‌ ಬನ್ನಿಕೊಪ್ಪ ಹಾಗೂ ಗ್ರಾಮಸ್ಥರಿದ್ದರು. ಸಾಧಕರಿಗೆ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಕ್ಕಮಹಾದೇವಿ ಹಾಗೂ ಉಮಾಪತಿ ರಾಜೂರು ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

Share this article