25 ರಂದು ನಿವೇಶನ, ಹಕ್ಕು ಪತ್ರ ವಿತರಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Apr 24, 2025 12:00 AM

ಸಾರಾಂಶ

ಏ. 25ರಂದು ಮಡಿಕೇರಿಯಲ್ಲಿ ಆಲ್‌ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಕೆ. ಮೊಣ್ಣಪ್ಪ ಹೇಳಿದರು.

ಮಡಿಕೇರಿ : ಜಿಲ್ಲೆಯ ಕೂಲಿ ಕಾರ್ಮಿಕರು ಹಾಗೂ ವಸತಿ ರಹಿತರಿಗೆ ನಿವೇಶನ ಮತ್ತು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಏ.25 ರಂದು ಮಡಿಕೇರಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಸಾಗಿ ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಆಕರ್ಷಕ ಪ್ರವಾಸಿತಾಣಗಳ ಮೂಲಕ ವಿಶ್ವದಲ್ಲೇ ಖ್ಯಾತಿಯನ್ನು ಗಳಿಸಿರುವ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಪರಿಶಿಷ್ಟರು, ಹಿಂದುಳಿದವರು ಹಾಗೂ ಕಡು ಬಡವರು ಸ್ವಂತ ಮನೆ, ಕೃಷಿಭೂಮಿ ಮತ್ತು ಸ್ಮಶಾನದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿರು. ಕಾಫಿ ತೋಟದ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ, ಪುನರ್‌ವಸತಿ ಕಲ್ಪಿಸಬೇಕು, ಕುಶಾಲನಗರದ ತಾಲೂಕಿನ ಚೆಟ್ಟಳ್ಳಿ, ಚೇರಳ ಶ್ರೀಮಂಗಲ, ಮಾದಾಪುರ, ಗರಗಂದೂರು ಹಾಗೂ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ವ್ಯಾಪ್ತಿಯ ವಸತಿ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು. ಪರಿಶಿಷ್ಟರ ಕಾಲೋನಿಗೆ ಸಂಪರ್ಕ ರಸ್ತೆ ಕಲ್ಪಿಸಬೇಕು, ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಬಡವರ ಪರ ಹೋರಾಡುತ್ತಿರುವ ಆಲ್ ಇಂಡಿಯಾ ಬಹುಜನ ಪಾರ್ಟಿಯ ಸದಸ್ಯರ ವಿರುದ್ಧ ಹೂಡಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕೆ.ಮೊಣ್ಣಪ್ಪ ಸಮಿತಿಯ ಉಪಾಧ್ಯಕ್ಷ ಟಿ.ಕಿರಣ್ ಜಗದೀಶ್, ಪದಾಧಿಕಾರಿಗಳಾದ ಟಿ.ಇ.ಸುಜಾತ, ಸೋಮಯ್ಯ, ಮಂಜುಳಾ ಹಾಗೂ ಪಿ.ಐ.ಸಂಜೀವ ಸುದ್ದಿಗೋಷ್ಠಿಯಲ್ಲಿದ್ದರು.

Share this article